ADVERTISEMENT

ಕಾಪು | ‘ಪ್ರವಾದಿಗಳು ಮಾನವರ ಹಿತಾಕಾಂಕ್ಷಿಗಳು’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:28 IST
Last Updated 13 ಸೆಪ್ಟೆಂಬರ್ 2025, 6:28 IST
ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲ್ಲೂಕು ಘಟಕದ ವತಿಯಿಂದ ವಿಚಾರಗೋಷ್ಠಿಯಲ್ಲಿ ದಂಡತೀರ್ಥ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಮಾತನಾಡಿದರು
ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲ್ಲೂಕು ಘಟಕದ ವತಿಯಿಂದ ವಿಚಾರಗೋಷ್ಠಿಯಲ್ಲಿ ದಂಡತೀರ್ಥ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಮಾತನಾಡಿದರು   

ಕಾಪು (ಪಡುಬಿದ್ರಿ): ‘ಸಮಾಜ ಕೆಟ್ಟು ಹೋದ ಸಮಯದಲ್ಲಿ ಜನರ ಕಲ್ಯಾಣಕ್ಕಾಗಿ ದೇವನು ಆಯಾಯ ಕಾಲದಲ್ಲಿ ಮನುಷ್ಯರ ನಡುವಿನಿಂದಲೇ ಪ್ರವಾದಿಗಳನ್ನು ಸೃಷ್ಟಿಸಿದ್ದಾನೆ. ಈ ಬಗ್ಗೆ ಬೈಬಲ್ ಮತ್ತು ಅದಕ್ಕಿಂತ ಮುಂಚೆ ಬಂದ ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿದೆ. ಪ್ರವಾದಿ ಮುಹಮ್ಮದ್‌ ಸಹ ದೇವನ ವತಿಯಿಂದ ಭೂಮಿಯ ಮೇಲೆ ನಿಯುಕ್ತಗೊಂಡ ಪ್ರವಾದಿ. ಆತನ ಆದೇಶದಂತೆ ನಡೆದು ಬದುಕಿ ತೋರಿಸಿದರು’ ಎಂದು ದಂಡತೀರ್ಥ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಹೇಳಿದರು.

ಅವರು ಗುರುವಾರ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡ್ಡ ‘ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ’ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಮಾತನಾಡಿ, ಇಂದು ಪ್ರತಿಯೊಂದು ಜಾತಿ– ಧರ್ಮದವರು ತಮ್ಮ ನಿಲುವೇ ಸರಿ ಎನ್ನುತ್ತಾ ಕೋಮುವಾದ, ಜಾತಿ ವಾತ್ಸಲ್ಯಕ್ಕೆ ಮಹತ್ವ ಕೊಡುವ ಕಾರಣ ಸಮಾಜದಲ್ಲಿ ಮಾನವೀಯತೆ, ಸೌಹಾರ್ದ ಕೆಡುತ್ತಿದೆ. ಆದ್ದರಿಂದ ನಾವು ಹೃದಯ ವೈಶಾಲ್ಯ ಮೆರೆದು ಅನ್ಯೋನ್ಯವಾಗಿ ಬದುಕಬೇಕು ಎಂದು ಹೇಳಿದರು.

ADVERTISEMENT

ಜಮಾಅತೆ ಇಸ್ಲಾಮಿ ಹಿಂದ್‌ನ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರು ಸಮಾಜದಲ್ಲಿ ಇರುವ ಬಡ್ಡಿ, ವ್ಯಭಿಚಾರ, ಮದ್ಯಪಾನ, ಜೂಜಾಟ, ಮೋಸ, ವಂಚನೆ, ಅವ್ಯವಹಾರ ಮಿತವಿಲ್ಲದ ಬಹುಪತ್ನಿತ್ವದ ಬಗ್ಗೆ ಕುರ್‌ಆನ್‌ ಆದೇಶದಂತೆ ಧ್ವನಿ ಎತ್ತಿದಾಗ ಅರಬರು ಪ್ರಾಮಾಣಿಕ, ಸತ್ಯವಂತ ಎಂಬ ಬಿರುದಾ೦ಕಿತ ವ್ಯಕ್ತಿಯೆಂದು ನೋಡದೆ ಅವರನ್ನು ಮಕ್ಕಾ ತೊರೆಯುವಂತೆ ಮಾಡಿದರು. ಕೆಟ್ಟು ಹೋಗಿದ್ದ ಅರಬ್ ರಾಷ್ಟ್ರದಲ್ಲಿ 23 ವರ್ಷ ಬೋಧನೆ ಮಾಡುತ್ತಾ, ಕೆಡುಕುಗಳನ್ನು ಒಳಿತುಗಳ ಮೂಲಕ ದೂರಿಕರಿಸುತ್ತಾ, ನ್ಯಾಯ ಪಾಲಿಸುತ್ತಾ, ಅನೋನ್ಯತೆ, ಸಹೋದರತೆ, ಸೌಹಾರ್ದದಿಂದ ಕೂಡಿದ ಸಮಾಜ ಕಟ್ಟಿದರು. ಅವರ ಬೋಧನೆಯನ್ನು ಇಂದು ಅನುಸರಿಸಿದರೆ ಅಂತಹ ವಾತಾವರಣ ನಿರ್ಮಿಸಬಹುದು ಎಂದು ಹೇಳಿದರು.

‘ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ ಆದರ್ಶದ ಔಚಿತ್ಯ’, ‘ಪ್ರವಾದಿ ಮುಹಮ್ಮದರನ್ನು (ಸಅ) ಅರಿಯಿರಿ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಮೌಲಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಜನಾಬ್ ಶಭಿಹ್ ಅಹಮದ್ ಕಾಝಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಕೋಶಾಧಿಕಾರಿ ಸಯ್ಯದ್ ಫರೀದ್ ಭಾಗವಹಿಸಿದ್ದರು.

ಮುಹಮ್ಮದ್ ರಾಯಿಫ್ ಕುರ್‌ಆನ್ ಪಠಿಸಿದರು. ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ನಸೀರ್ ಅಹಮದ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯ ಅನ್ವರ್ ಅಲಿ ಕಾಪು ಪ್ರಾಸ್ತಾವಿಕವಾಗಿ ಮಾತನಾಡಿದದರು. ಕೋಶಾಧಿಕಾರಿ ಬಿ.ಎಂ. ಮೊಯಿದಿನ್ ವಂದಿಸಿದರು. ತಾಲ್ಲೂಕು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.