ಪಡುಬಿದ್ರಿ: ‘ಪ್ರಖರ ಬರವಣಿಗೆ ಮೂಲಕ ಮನೆ ಮಾತಾಗಿದ್ದ ಪತ್ರಕರ್ತ ಜಯಂತ್ ಅವರಂತಹ ವಿದ್ಯಾರ್ಥಿಗಳು ಸಮಾಜಕ್ಕೆ ಬೇಕು. ಅವರು ನಿಷ್ಠುರವಾದಿಯಾಗಿ ವಸ್ತುನಿಷ್ಟ ವರದಿ ಮಾಡುತ್ತಿದ್ದರು. ಇದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು’ ಎಂದು ಜಾನಪದ ಚಿಂತಕ, ವೈ.ಎನ್.ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹೆಜಮಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದತ್ತಿನಿಧಿ ವಿತರಿಸಿ, ದತ್ತಿ ಉಪನ್ಯಾಸ ನೀಡಿದರು.
ಇಂದಿನ ದಿನಗಳಲ್ಲಿ ಸಮಾಜ ಭ್ರಷ್ಟಾಚಾರದಿಂದ ನಲುಗಿ ಹೋಗುತ್ತಿದೆ. ನಮ್ಮ ಶಾಸಕಾಂಗ, ಕಾರ್ಯಂಗದಲ್ಲೂ ಕೊರತೆ ಎದ್ದು ಕಾಣುತ್ತಿದೆ. ಇವನ್ನೆಲ್ಲಾ ನಿಯಂತ್ರಣ ಮಾಡವುದು ಪತ್ರಿಕಾರಂಗದಿಂದ ಮಾತ್ರ ಸಾಧ್ಯ. ಮಾಧ್ಯಮಗಳಿಂದ ಅಭಿಪ್ರಾಯ ಹೊರಬಂದಾಗ ತಪ್ಪಿತಸ್ಥರಿಗೆ ಕಂಪನ ಆರಂಭವಾಗುತ್ತದೆ. ಮಾಧ್ಯಮಗಳ ಜವಾಬ್ದಾರಿ ದೊಡ್ಡದು. ವಸ್ತುನಿಷ್ಟ, ದಕ್ಷ, ಪ್ರಾಮಾಣಿಕ ವರದಿಗಳು ಸಮಾಜವನ್ನು ನಿಯಂತ್ರಿಸಿ ಸದೃಢಗೊಳಿಸುತ್ತವೆ ಎಂದು ಅವರು ಹೇಳಿದರು.
ಪತ್ರಕರ್ತ ರಾಕೇಶ್ ಕುಂಜೂರು ಅವರು ಮಾಧ್ಯಮ ಕುರಿತು ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡು ಸಂವಾದ ನಡೆಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಹೆಜಮಾಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಸಂಪಾವತಿ ಮಾತನಾಡಿದರು.
ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಐದು ದಿನಪತ್ರಿಕೆಗಳನ್ನು ಹಂಚಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಸ್ವಾಗತಿಸಿದರು. ವಿಜಯ ಆಚಾರ್ಯ ಉಚ್ಚಿಲ ನಿರ್ವಹಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಕಾಪು ವಂದಿಸಿದರು.
ಶಾಲೆಗಳಲ್ಲಿ ಬ್ರಹ್ಮಕಲಶ
ಇತ್ತೀಚಿನ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ. ಸಾಕಷ್ಟು ಮೂಲಸೌಕರ್ಯಗಳು ಇಲ್ಲದೆ ಇರುವುದು ಒಂದು ಕಾರಣ. ಈ ನಿಟ್ಟಿನಲ್ಲಿ ‘ಶಾಲೆಗಳಿಗೆ ಬ್ರಹ್ಮಕಲಶ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅತಿ ಅಗತ್ಯ ಎಂದು ವೈ.ಎನ್.ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.