ಕಾರ್ಕಳ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲ್ಲೂಕು ಘಟಕ, ಕಾಂತಾವರದ ಕನ್ನಡ ಸಂಘ ಮತ್ತು ಅಲ್ಲಮಪ್ರಭು ಪೀಠದ ಸಹಭಾಗಿತ್ವದಲ್ಲಿ ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವಿದ್ವಾಂಸ ರಾಘವೇಂದ್ರ ರಾವ್ ಪಡುಬಿದ್ರಿ ಅವರು ಸಾಕೇತದ ಸಂಭ್ರಮ ಎಂಬ ವಿಷಯದ ಕುರಿತು ಮಾತನಾಡಿ ವಿಶ್ವಾಮಿತ್ರರ ಜೊತೆ ಮಿಥಿಲೆಗೆ ಹೊರಟ ರಾಮಲಕ್ಷ್ಮಣರು ಅರಣ್ಯ ಮಧ್ಯದಲ್ಲಿ ಪಾಳು ಬಿದ್ದ ಆಶ್ರಮವನ್ನು ಕಂಡು ವಿಶ್ವಾಮಿತ್ರರಲ್ಲಿ ಪ್ರಶ್ನಿಸುತ್ತಾರೆ. ಆಗ ಗೌತಮ ಮತ್ತು ಅಹಲ್ಯೆಯ ಕಥೆಯನ್ನು ವಿವರಿಸಿದ ವಿಶ್ವಾಮಿತ್ರ ರು ಅಹಲ್ಯೆಯು ಶಾಪಕ್ಕೊಳಗಾದ ತಾಣವನ್ನು ತೋರಿಸುತ್ತಾರೆ ಎಂದರು.
ಶ್ರೀರಾಮನಿಂದ ಅಹಲ್ಯೆಯ ಶಾಪ ವಿಮೋಚನೆಯಾಗುತ್ತದೆ. ನಂತರ ಮಿಥಿಲೆಗೆ ತೆರಳುತ್ತಾರೆ. ಅಲ್ಲಿ ಜನಕ ಮಹಾರಾಜನ ಆಸ್ಥಾನದಲ್ಲಿದ್ದ ಶಿವಧನುಸ್ಸನ್ನು ರಾಮನು ಎತ್ತಿದಾಗ ಅದು ತುಂಡಾಗುತ್ತದೆ. ಅಸಂಭವವಾದುದನ್ನು ಶ್ರೀರಾಮ ಸಾಧಿಸಿದ ಎಂಬ ಆನಂದದಿಂದ ಅಯೋಧ್ಯೆಯ ರಾಜ ದಶರಥನನ್ನು ಬರಮಾಡಿಕೊಂಡು ಶ್ರೀರಾಮ ಸೀತೆಯ ವಿವಾಹ ನೆರವೇರಿಸಲಾಗುತ್ತದೆ ಎಂದು ಹೇಳಿದರು.
ಕಾಂತಾವರದ ಡಾ.ನಾ.ಮೊಗಸಾಲೆ, ರಂಗಸಂಸ್ಕೃತಿಯ ನಿತ್ಯಾನಂದ ಪೈ ಮತ್ತು ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ಡಾ.ಸುಮತಿ ಪಿ. ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಜಗದೀಶ ಗೋಖಲೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.