
ಕಾರ್ಕಳ: ಇಲ್ಲಿನ ಬಾಹುಬಲಿ ಪ್ರವಚನ ಮಂದಿರದಲ್ಲಿ ಸೋಮವಾರ ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವ– 2027ರ ಪೂರ್ವಭಾವಿ ಸಭೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಜೈನಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಬಾಹುಬಲಿ ಮಸ್ತಕಾಭಿಷೇಕ ಕಾರ್ಕಳಕ್ಕೆ ಮಾತ್ರವಲ್ಲ ನಾಡಿಗೆ ಹೆಮ್ಮೆ ತರುವ ಕಾರ್ಯಕ್ರಮ. ಇದಕ್ಕಾಗಿ ಜೈನ ಸಮುದಾಯದವರು ಒಟ್ಟಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಅನುದಾನದ ಭರವಸೆ ನೀಡಿದ್ದಾರೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅವರು ಸರ್ಕಾರದ ಜೊತೆ ಮಾತುಕತೆ ನಡೆಸಿ ಅನುದಾನ ದೊರಕಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.
ಮಸ್ತಕಾಭಿಷೇಕ ಸಂದರ್ಭ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದ್ದು, ರಾಮಸಮುದ್ರದಿಂದ ಗೊಮ್ಮಟ ಬೆಟ್ಟದವರೆಗಿನ ರಸ್ತೆ ವಿಸ್ತರಣೆ, ಅನಂತಶಯನದಿಂದ ಗೊಮ್ಮಟ ಬೆಟ್ಟದವರೆಗಿನ ರಸ್ತೆ ಸುಧಾರಣೆ ನಡೆಯಬೇಕಿದೆ. ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ 36 ಸಮಿತಿಗಳನ್ನು ರಚಿಸಲಾಗಿದೆ. ಎಲ್ಲರ ಅಭಿಪ್ರಾಯ, ಸಲಹೆ ಸೂಚನೆ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಸಭಿಕರಲ್ಲಿ 23 ಜನ ಅಭಿಪ್ರಾಯ ಮಂಡಿಸಿದರು. ಪ್ರತ್ಯೇಕ ಸಮಯ ಪಾಲನಾ ಸಮಿತಿ ರಚಿಸಬೇಕು, ಮಸ್ತಕಾಭಿಷೇಕ ಸಂದರ್ಭ ಜೈನೇತರ ಧಾರ್ಮಿಕ ನಾಯಕರನ್ನು ಆಹ್ವಾನಿಸುವುದು, ಮಸ್ತಕಾಭಿಷೇಕದ ನೆನಪಿಗೆ ಬಡವರಿಗೆ ಆರ್ಥಿಕ ಸಹಾಯ, ಮಸ್ತಕಾಭಿಷೇಕ ಆರಂಭವಾಗುವ ತನಕ ಜೈನರ ಮನೆಗಳಲ್ಲಿ ಹುಂಡಿಯಿಟ್ಟು ಧನಸಹಾಯ ಯೋಜನೆಯಂತೆ ಕಾಣಿಕೆ ತೆಗೆದಿಡುವಿಕೆ ಮೊದಲಾದ ಸಲಹೆಗಳು ಬಂದವು.
ಅಭಯಚಂದ್ರ ಜೈನ್, ಮುಖಂಡರಾದ ಅನಂತರಾಜ ಪೂವಣಿ, ಪುಷ್ಪರಾಜ್ ಜೈನ್ ಮಂಗಳೂರು, ಅಂಡಾರು ಮಹಾವೀರ ಹೆಗ್ಡೆ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ರತ್ನರಾಜ್ ಅರಸು ಯಾನೆ ಕಿನ್ಯಕ್ಕ ಬಲ್ಲಾಳ್, ಸೂರಜ್ ಕುಮಾರ್, ಸುಧೀರ್ ಪಡಿವಾಳ್ ಮಂಗಳೂರು, ಕೆ.ಸಿ. ಧರಣೇಂದ್ರಯ್ಯ ಕಳಸ, ಡಾ.ಜೀವಂಧರ ಬಲ್ಲಾಳ್ ಬಾರಾಡಿಬೀಡು, ಬ್ರಹ್ಮದೇವ ಕಳಸ, ಶಿವಪ್ರಸಾದ್ ಅಜಿಲ ಭಾಗವಹಿಸಿದ್ದರು.
ಭುಜಬಲಿ ಬ್ರಹ್ಮಚರ್ಯಾಶ್ರಮದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮೋಹನ್ ಪಡಿವಾಳ್ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ನಿರೂಪಿಸಿದರು. ಪುಷ್ಪರಾಜ್ ಜೈನ್ ವಿವರ ನೀಡಿದರು. ಅಂಡಾರು ಮಹಾವೀರ ಹೆಗ್ಡೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.