ADVERTISEMENT

ಕಾರ್ಕಳ | ‘ಕಾಂಗ್ರೆಸ್ ಬಡವರ ಬಗ್ಗೆ ಚಿಂತಿಸುವ ಪಕ್ಷ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:25 IST
Last Updated 13 ಸೆಪ್ಟೆಂಬರ್ 2025, 6:25 IST
ಕಾರ್ಕಳದ ಮಂಜುನಾಥ ಪೈ ಸಮುದಾಯ ಭವನದಲ್ಲಿ ‌ಶುಕ್ರವಾರ ಕಾರ್ಕಳ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ತಾಲೂಕು ಆಶ್ರಯದಲ್ಲಿ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್ ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮ
ಕಾರ್ಕಳದ ಮಂಜುನಾಥ ಪೈ ಸಮುದಾಯ ಭವನದಲ್ಲಿ ‌ಶುಕ್ರವಾರ ಕಾರ್ಕಳ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ತಾಲೂಕು ಆಶ್ರಯದಲ್ಲಿ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್ ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮ   

ಕಾರ್ಕಳ: ಕಾಂಗ್ರೆಸ್ ಪಕ್ಷ ಸದಾ ಬಡವರ ಬಗ್ಗೆ ಚಿಂತಿಸುವ ಪಕ್ಷವಾಗಿದ್ದು ಸರ್ಕಾರ ಬಡವರ, ಮಹಿಳೆಯರ, ದೀನ ದಲಿತರ ಕುರಿತು ಯೋಚಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ‌

ಇಲ್ಲಿನ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ‌ಶುಕ್ರವಾರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ತಾಲ್ಲೂಕು ಆಶ್ರಯದಲ್ಲಿ ಆಯೋಜಿಸಿದ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯಾ ನಂತರದ 79 ವರ್ಷಗಳಲ್ಲಿ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಯೋಜನೆಗಳು. ಸಾಲಮೇಳದ ಮೂಲಕ ಬ್ಯಾಂಕ್‌ ಅನ್ನು ಜನರ ಮನೆ ಬಾಗಿಲಿಗೆ ಕೊಂಡ್ಯೊಯ್ದ ಇಂದಿರಾ ಗಾಂಧಿ ಉಳುವವನೇ ಭೂಮಿ ಒಡೆಯ ಎಂಬ ದಿಟ್ಟ ಕಾಯ್ದೆಯನ್ನು ಜಾರಿಗೆ ತಂದರು ಎಂದು ಹೇಳಿದರು.

ಇದೀಗ ರಾಜ್ಯದ 1.24 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಣ ಸಂದಾಯವಾಗುತ್ತಿದ್ದು ಜಿಎಸ್‌ಟಿ, ಆದಾಯ ತೆರಿಗೆ ಸಮಸ್ಯೆಯಿಂದ ಸುಮಾರು ಎರಡು ಲಕ್ಷ‌ ಮಹಿಳೆಯರಿಗೆ ಹಣ ಸಂದಾಯವಾಗುತ್ತಿಲ್ಲ. ಈ ಪೈಕಿ 50 ಸಾವಿರ ಮಹಿಳೆಯರಿಗಿದ್ದ ಜಿಎಸ್‌ಟಿ ಸಮಸ್ಯೆ ಸರಿಪಡಿಸಲಾಗಿದೆ. ಉಳಿದ ಒಂದೂವರೆ ಲಕ್ಷ ಮಹಿಳೆಯರ ಸಮಸ್ಯೆಯನ್ನು ಬಗೆ ಹರಿಸಿ ಹಣ ಸಂದಾಯಕ್ಕೆ ಪ್ರಯತ್ನಿಸಲಾಗುವುದು ಎಂದರು.

ADVERTISEMENT

ಅಂಗನವಾಡಿ ಕೇಂದ್ರಗಳ ಮೂಲಕ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ, ಆರೈಕೆ ಮಾಡಲಾಗುತ್ತಿದೆ. ಇಂದಿರಾಗಾಂಧಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ ಮುಂದಿನ ತಿಂಗಳಿಗೆ ಸುವರ್ಣ ವರ್ಷ ಪೂರೈಸುತ್ತಿದ್ದು, ನವೆಂಬರ್‌ನಲ್ಲಿ ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅಧಿಕಾರಕ್ಕೆ‌ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸುವ ನಿರ್ಧಾರ ಮಾಡಿದ್ದು ಸರ್ಕಾರದ ಸಾಧನೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿ ಬೇರೆ ರಾಜ್ಯಗಳಲ್ಲಿ ನಮ್ಮೃ ಯೋಜನೆಗಳನ್ನು ನಕಲು ಮಾಡುತ್ತಿದೆ. ಇದು ನಮ್ಮ ಸರ್ಕಾರದ ಸಾಧನೆ. ಕಾರ್ಕಳದ ಸಚಿವರು, ಕರ್ನಾಟಕ ಮಾಡೆಲ್ ಯೋಜನೆಗಳನ್ನು ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಬದಲಿಸಿಕೊಂಡಿದ್ದಾರೆ ಎಂದರು.

ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಕಳ ಪುರಸಭಾಧ್ಯಕ್ಷ ಯೋಗೀಶ ದೇವಾಡಿಗ, ಕುಕ್ಕುಂದೂರು‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪಾ, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್, ಇಒ ಪ್ರಶಾಂತ್ ರಾವ್, ಲೀನ ಬ್ರಿಟ್ಟೋ, ಪ್ರದೀಪ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.