ADVERTISEMENT

ಮೀಸಲಾತಿ ಗೂಡಿಗೆ ಕೈಹಾಕಿ ಜೇನು ಹಂಚಿದ ಬಿಜೆಪಿ ಸರ್ಕಾರ

ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 13:55 IST
Last Updated 30 ಮಾರ್ಚ್ 2023, 13:55 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ದೇವರಾಜ ಅರಸು ಬಳಿಕ ಮೀಸಲಾತಿ ಎಂಬ ಜೇನುಗೂಡಿಗೆ ಕೈಹಾಕಿ ಎಲ್ಲ ಸಮಾಜದವರಿಗೂ ಮೀಸಲಾತಿಯ ಸಿಹಿ ಹಂಚಿದ್ದು ಬಿಜೆಪಿ ಸರ್ಕಾರ ಮಾತ್ರ ಎಂದು ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ ಶೇ 17ಕ್ಕೆ ಹೆಚ್ಚಿಸಿಎಡಗೈ, ಬಲಗೈ, ಅಲೆಮಾರಿ ಸೇರಿದಂತೆ ಸ್ಪೃಶ್ಯ ಪರಿಶಿಷ್ಟ ಜಾತಿಗಳಿಗೆ ಸಮನಾಗಿ ಹಂಚಿಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ 7ಕ್ಕೆ ಹೆಚ್ಚಿಸಿ ಸಣ್ಣ ಸಮುದಾಯಗಳನ್ನು ಹೆಕ್ಕಿ ಸಾಮಾಜಿಕ ನ್ಯಾಯ ಕೊಡಲಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 20 ನಿಮಗಳನ್ನು ರಚಿಸಲಾಗಿದ್ದು, ಒಕ್ಕಲಿಗರು, ವೀರಶೈವರು, ಕುಂಬಾರರು, ಬಲಿಜರು ಸೇರಿದಂತೆ ಹಲವು ಸಮುದಾಯಗಳ ನಿಗಮ ರಚಿಸಿ ಜನಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ನೀಡಲಾಗಿದೆ. ರಾಜಕಾರಣದಲ್ಲಿ ತೆಗೆದುಕೊಂಡಿರುವ ಕಠಿಣ ನಿರ್ದಾರಗಳಿಂದ ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ವರ್ಗಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿವೆ ಎಂದು ಕೋಟ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮುಸ್ಲಿಮರಿಗೆ ಅನ್ಯಾಯ ಮಾಡಿಲ್ಲ: ಧರ್ಮದ ಆಧಾರದಲ್ಲಿ ಮೀಸಲಾತಿ ಇಲ್ಲ ಎಂಬ ಕಾರಣಕ್ಕೆ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪ್ರವರ್ಗದಿಂದ ಕೈಬಿಟ್ಟು ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಮೀಸಲಿರಿಸಿದ್ದ ಶೇ 10ರ ಮೀಸಲಾತಿ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಮುಸ್ಲಿಮರಿಗೆ ಅನ್ಯಾಯಗಳಾಗುವುದಿಲ್ಲ ಬದಲಾಗಿ ಹೆಚ್ಚು ಅನುಕೂಲವಾಗಲಿದೆ ಎಂದರು.

ಬಂಟರ ಭಾವನೆಗೆ ಬೆಲೆ: ಕರಾವಳಿಯಲ್ಲಿ ಬಂಟ ಸಮುದಾಯ ರಾಷ್ಟ್ರೀಯತೆಗೆ ಒತ್ತು ಕೊಟ್ಟಿದ್ದು ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿದೆ. ಬಂಟರ ಸಮುದಾಯದ ಭಾವನೆ ಬೇಡಕೆಗಗಳನ್ನು ಸರ್ಕಾರ ಪರಿಶೀಲಿಸಲಿದೆ. ಅನಾಥ ಮಕ್ಕಳಿಗೆ ಮೀಸಲಾತಿ ನೀಡಬೇಕು ಎಂಬ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಶಿಫಾರಸುಗಳನ್ನು ಸರ್ಕಾರ ಭಾಗಶಃ ಒಪ್ಪಿಕೊಂಡಿದ್ದು ಅಂಗೀಕರಿಸಲಿದೆ ಎಂದರು.

ಉರಿಗೌಡ ನಂಜೇಗೌಡ ವಿವಾದ ಅಂತ್ಯ: ಉರಿ ಗೌಡ, ನಂಜೇಗೌಡರ ವಿಚಾರವಾಗಿ ಸಿನಿಮಾ ನಿರ್ಮಾಣ ಮಾಡದಂತೆ ಒಕ್ಕಲಿಗರ ಸಮುದಾಯದ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರ ಭಾವನೆಗಳಿಗೆ ಬೆಲೆ ಕೊಡಲು ಬಿಜೆಪಿ ನಿರ್ಧರಿಸಿದೆ ಎಂದು ಕೋಟ ಹೇಳಿದರು.

ಸಮೀಕ್ಷೆ ಆಧರಿಸಿ ಟಿಕೆಟ್‌: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು ಮಾಹಿತಿ ಸಂಗ್ರಹಿಸಲಾಗಿದೆ. ಕಾರ್ಯಕರ್ತರ, ಶಾಸಕರ ಹಾಗೂ ಆಕಾಂಕ್ಷಿತರ ಅಭಿಪ್ರಾಯವನ್ನು ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಜಕೀಯದಲ್ಲಿ ಸಕ್ರಿಯವಾಗಿಲ್ಲದಿದ್ದರೂ ಚುನಾವಣೆಯ ವಿಚಾರದಲ್ಲಿ ಪಕ್ಷಕ್ಕೆ ಸಲಹೆ ಸೂಚನೆಗಳನ್ನು ನೀಡುವುದರಲ್ಲಿ ತಪ್ಪಿಲ್ಲ. ಹಾಲಿ ಶಾಸಕರ ಬದಲಾವಣೆ ಹಾಗೂ ಹೊಸ ಪ್ರಯೋಗ ವಿಚಾರದಲ್ಲಿ ಪಕ್ಷದ ನಿರ್ಧಾರವೇ ಅಂತಿಮ ಎಂದರು.

ಮುತಾಲಿಕ್‌ ಬಗ್ಗೆ ಗೌರವ: ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಗೌರವವಿದ್ದು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಆದರೆ, ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಅವರಿಗೆ ಟಿಕೆಟ್‌ ಕೊಡಲಾಗುವುದಿಲ್ಲ ಎಂದರು.

ಪಡಿತರದಲ್ಲಿ ಕುಚಲಕ್ಕಿ ವಿತರಿಸಲು ಶ್ರಮ: ಕರಾವಳಿಗರಿಗೆ ಪಡಿತರದಲ್ಲಿ ಕುಚಲಕ್ಕಿ ಕೊಡಬೇಕು ಎಂಬುದರ ಹಿಂದೆ ಪ್ರಚಾರದ ಉದ್ದೇಶವಿಲ್ಲ; ಬದಲಾಗಿ ನೈಜ ಕಾಳಜಿ ಇದೆ. ಕುಚಲಕ್ಕಿ ಭತ್ತ ಲಭ್ಯವಿಲ್ಲದ ಪರಿಣಾಮ 1001 ತಳಿಯ ಭತ್ತ ಖರೀದಿಸಿ ವಿತರಿಸುವ ಉದ್ದೇಶವೂ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.