ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳ ಕೆಲವು ಕ್ಷೇತ್ರಗಳಿಗೆ ಅನುದಾನ ಘೋಷಿಸಿದ್ದರೂ, ಉಡುಪಿ ಜಿಲ್ಲೆಯ ಜನರ ಪ್ರಮುಖ ಬೇಡಿಕೆಗಳನ್ನು ಮಾತ್ರ ಪರಿಗಣಿಸಿಲ್ಲ.
ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿತ್ತು. ವೈದ್ಯಕೀಯ ಕಾಲೇಜು ಬೇಕೆಂದು ಜನರು ಅಭಿಯಾನವನ್ನು ಕೂಡ ನಡೆಸಿದ್ದರು. ಆದರೆ, ಅದಕ್ಕೆ ಮನ್ನಣೆ ಮಾತ್ರ ಸಿಕ್ಕಿಲ್ಲ.
ಈ ಹಿಂದೆ ವೈದ್ಯಕೀಯ ಕಾಲೇಜಿಗಾಗಿ ನಿವೇಶನವನ್ನು ಗುರುತಿಸಲಾಗಿತ್ತಾದರೂ ವೈದ್ಯಕೀಯ ಕಾಲೇಜು ಮಾತ್ರ ಸಾಕಾರವಾಗಿರಲಿಲ್ಲ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ, ಇಲ್ಲಿನ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಬಹುದು ಎಂಬುದು ಇಲ್ಲಿನ ಜನರ ಆಶಯವಾಗಿದೆ.
ಕೃಷಿ ಕಾಲೇಜು ಆರಂಭಿಸಬೇಕೆಂಬುದು ಈ ಭಾಗದ ರೈತರ ಪ್ರಮುಖ ಬೇಡಿಕೆಯಾಗಿದ್ದು, ಅದಕ್ಕೂ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ. ಬ್ರಹ್ಮಾವರದಲ್ಲಿ ಈಗಿರುವ ಕೃಷಿ ಡಿಪ್ಲೊಮಾ ಕಾಲೇಜಿನ ಸೌಕರ್ಯಗಳನ್ನೇ ಬಳಸಿಕೊಂಡು ಕೃಷಿ ಕಾಲೇಜು ಆರಂಭಿಸಬೇಕೆಂದು ರೈತ ಸಂಘಟನೆಗಳೂ ಆಗ್ರಹಿಸಿದ್ದವು.
ಈ ಭಾಗದ ರೈತರ ಮಕ್ಕಳಿಗೆ ಅನುಕೂಲವಾಗಲು ಮತ್ತು ಯುವಜನರನ್ನು ಕೃಷಿಯ ಕಡೆಗೆ ಸೆಳೆಯಲು ಕೃಷಿ ಕಾಲೇಜು ಆರಂಭಿಸಬೇಕೆಂದೂ ಒತ್ತಾಯಿಸಿದ್ದರು.
ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೂ ಯಾವುದೇ ಅನುದಾನ ಘೋಷಣೆಯಾಗಿಲ್ಲ. ಈ ಕಾರ್ಖಾನೆಯಲ್ಲಿ ಗುಜರಿ ವಸ್ತುಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಇನ್ನೂ ಮುಂದುವರಿದಿದೆ.
15 ವರ್ಷ ಮೀರಿದ ಮೊಟರೀಕೃತ ಮೀನುಗಾರಿಕಾ ದೋಣಿಗಳ ಎಂಜಿನ್ ಬದಲಾವಣೆಗೆ ಗರಿಷ್ಠ ₹1 ಲಕ್ಷ ಘೋಷಿಸಿರುವುದರಿಂದ ಹಲವು ಮೀನುಗಾರರಿಗೆ ಅನುಕೂಲವಾಗಲಿದೆ.
ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಕ್ ವ್ಯವಸ್ಥೆ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರೂ ಈ ಅತಿ ದೊಡ್ಡ ಮೀನುಗಾರಿಕಾ ಬಂದರಿನ ಸುರಕ್ಷತೆಗಾಗಿ ಯಾವುದೇ ಯೋಜನೆಗಳನ್ನು ಘೋಷಿಸಲಾಗಿಲ್ಲ.
ಮಳೆಗಾಲದಲ್ಲಿ ಟ್ರಾಲಿಂಗ್ ನಿಷೇಧದ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಬೋಟ್‌ಗಳನ್ನು ಬಂದರಿನಲ್ಲಿ ನಿಲ್ಲಿಸಲಾಗುತ್ತದೆ. ಈ ವೇಳೆ ಬಂದರಿಗೆ ಹೆಚ್ಚಿನ ಸುರಕ್ಷತೆ ಒದಗಿಸಬೇಕೆಂಬುದು ಮೀನುಗಾರರ ಬೇಡಿಕೆಯಾಗಿತ್ತು ಅದಕ್ಕೂ ಮನ್ನಣೆ ಸಿಕ್ಕಿಲ್ಲ.
ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೀನುಗಾರಿಕಾ ದೋಣಿಗಳ ಉದ್ದದ ಮಿತಿ ಸಡಿಲಿಸುವುದಾಗಿ ಘೋಷಿಸಿರುವುದರಿಂದ ಮೀನುಗಾರರಿಗೆ ಅನುಕೂಲವಾಗಲಿದೆ. ಆದರೆ, ತೀವ್ರ ಸಂಕಷ್ಟ ಎದುರಿಸುತ್ತಿರುವ ನಾಡದೋಣಿ ಮೀನುಗಾರರ ಸಮಗ್ರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಘೋಷಿಸದಿರುವುದು ಅವರಲ್ಲಿ ನಿರಾಸೆ ಮೂಡಿಸಿದೆ.
‘ಶಾಶ್ವತ ಅಭಿವೃದ್ಧಿಯ ಮಾತುಗಳೇ ಇಲ್ಲ’
ಸಿದ್ದರಾಮಯ್ಯ ಅವರು ಮಂಡಿಸುವ 16ನೇ ಬಜೆಟ್ ಬಗ್ಗೆ ಬಹು ನಿರೀಕ್ಷೆ ಇತ್ತು. ಆದರೆ ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ಅನುದಾನವು ಇಲ್ಲ ಶಾಶ್ವತ ಅಭಿವೃದ್ಧಿಯ ಮಾತುಗಳೇ ಇಲ್ಲ. ಬದಲಾಗಿ ಉಡುಪಿಯಲ್ಲಿ ಅವರಿಗೆ ಕಂಡಿದ್ದು ಭೂಕುಸಿತ ಮಾತ್ರ. ಅನುದಾನ ಹಂಚುವಾಗ ವಿವಿಧ ವಲಯಗಳಿಗೆ ಒತ್ತು ಕೊಡಬೇಕೇ ವಿನಃ ಜಾತಿ ಧರ್ಮವನ್ನು ನೇೂಡಿ ಹಂಚಬಾರದು. ಕೈಗಾರಿಕಾ ಭೂಮಿ ಹಂಚಿಕೆಯಲ್ಲೂ ಶಿಕ್ಷಣ ಸವಲತ್ತುಗಳನ್ನು ನೀಡುವಾಗಲೂ ಜಾತಿ ಮತೀಯ ವಿಷಯಗಳನ್ನು ಮಂಡಿಸುವುದು ಸರಿಯಲ್ಲ. ಅಂದರೆ ಕಾಮಗಾರಿಯಲ್ಲಿನ ಗುಣಮಟ್ಟ ಮುಖ್ಯವೇ ಹೊರತು ಜಾತಿ ಮತೀಯ ಆಧಾರದಲ್ಲಿ ಹಣ ಹಂಚುವುದು ಸರಿಯಲ್ಲ. – ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಎಂಜಿಎಂ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ
‘ಹೋರಾಟಕ್ಕೆ ಸಂದ ಫಲ’
ಬಜೆಟ್‌ನಲ್ಲಿ ಕೊರಗ ಸಮುದಾಯದವರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಘೋಷಿಸದಿದ್ದರೂ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಯುವಜನರ ಉದ್ಯೋಗಕ್ಕೆ ಸಂಬಂಧಿಸಿ ನೇರ ನೇಮಕಾತಿ ಕುರಿತು ಘೋಷಿಸಲಾಗಿದೆ. ಅಲ್ಲದೆ ₹200 ಕೋಟಿ ಅನುದಾನವನ್ನೂ ಘೋಷಿಸಲಾಗಿದೆ. ಇದು ನಮ್ಮ ಹೋರಾಟಕ್ಕೆ ಸಂದ ಫಲ. ನಾವು ಕೂಡ ಅರಣ್ಯ ಮೂಲ ಬುಡಕಟ್ಟು ಸಮುದಾಯದಲ್ಲೇ ಬರುತ್ತೇವೆ. ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆಗಳು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ –ಕೇರಳದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.
‘ತುಳು ಎರಡನೇ ಭಾಷೆಯಾಗಿ ಘೋಷಿಸಬೇಕಿತ್ತು’
ರಾಜ್ಯದ ಎಲ್ಲಾ ಸಮುದಾಯಗಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಮಂಡನೆಯಾದ ಸಮಗ್ರ ಅಭಿವೃದ್ಧಿ ಬಜೆಟ್ ಇದು. ಆದರೂ ಉಡುಪಿ ಜಿಲ್ಲೆಗೆ ಈ ಬಜೆಟ್‌ನಲ್ಲಿ ನಿರೀಕ್ಷಿಸಿದ ಕೆಲವು ಅಭಿವೃದ್ಧಿ ಕಾರ್ಯಕ್ರಮ ಘೋಷಣೆಯಾಗಿಲ್ಲ. ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಧಿಕೃತ ಎರಡನೇ ರಾಜ್ಯ ಭಾಷೆಯಾಗಿ ತುಳುವನ್ನು ಘೋಷಣೆ ಮಾಡಬೇಕಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಉಡುಪಿ ಜಿಲ್ಲೆಯ ಬೆಳಪು ವಿಜ್ಞಾನ ಕೇಂದ್ರಕ್ಕೆ ಅನುದಾನ ಘೋಷಿಸಬೇಕಿತ್ತು. ಆದರೆ ಘೋಷಿಸಲಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಜಾರಿ ಮಾಡುವ ಉದ್ದೇಶ ಶ್ಲಾಘನೀಯ ಎಂದು ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮಭೂಮಿ ತಿಳಿಸಿದ್ದಾರೆ.
‘ಜಿಲ್ಲೆಯ ರೈತರಿಗೆ ನಿರಾಸೆ’
ಈ ಬಾರಿಯ ಬಜೆಟ್ ಜಿಲ್ಲೆಯ ರೈತರಿಗೆ ನಿರಾಸೆ ತಂದಿದೆ. ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡಬೇಕೆಂಬ ಬೇಡಿಕೆಗೂ ಸ್ಪಂದಿಸಿಲ್ಲ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳಿಗೆ ರಕ್ಷಣೆ ಒದಗಿಸಲು ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡುವವರಿಗೆ ಶೇ 90ರಷ್ಟು ಸಹಾಯಧನ ಘೋಷಿಸಬೇಕೆಂಬುದು ಕೃಷಿಕರ ಬೇಡಿಕೆಯಾಗಿತ್ತು ಅದು ಕೂಡ ಸಾಕಾರವಾಗಿಲ್ಲ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಲತಾಯಿ ಧೋರಣೆ: ಕರಾವಳಿ ಜಿಲ್ಲೆಯನ್ನು ಸದಾ ನಿರ್ಲಕ್ಷಿಸುವ ರಾಜ್ಯ ಸರ್ಕಾರದ ನಿಲುವು ಈ ಬಾರಿಯ ಬಜೆಟ್‌ನಲ್ಲೂ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಾವಳಿ ಜನರ ಅಭಿವೃದ್ಧಿ ಬೇಡಿಕೆಗೆ ಯಾವುದೇ ಯೋಜನೆಗಳನ್ನು ಘೋಷಿಸದೆ ಮಲತಾಯಿ ಧೋರಣೆಯ ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಗೆ ಅಗತ್ಯ ಅನುದಾನ, ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಏರಿಕೆ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಘೋಷಿಸಿಲ್ಲ ಎಂದಿದ್ದಾರೆ.
ಮೀನುಗಾರಿಕೆ ಕಡೆಗಣನೆ: ಮೀನುಗಾರಿಕೆ, ಮೀನುಗಾರರನ್ನು ಮತ್ತು ಕರಾವಳಿಯನ್ನು ದ್ವೇಷಿಸುವ ಬಜೆಟ್ ಇದಾಗಿದೆ. ರಾಜ್ಯದ ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ್ತಾ ಬರುತ್ತಿರುವ ಮೀನುಗಾರಿಕಾ ವಲಯದ ಉತ್ತೇಜನಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಅಲ್ಲದೆ, ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
ಸಾಲದ ಶೂಲಕ್ಕೆ ದೂಡಿರುವ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರಾಜ್ಯವನ್ನು ₹1.16 ಸಾವಿರ ಕೋಟಿ ಸಾಲದ ಶೂಲಕ್ಕೆ ದೂಡಿದೆ ಎಂದು ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ₹67,877 ಕೋಟಿ ಕೇಂದ್ರದ ಸ್ವೀಕೃತಿಯನ್ನು ತೋರಿಸಿರುವುದು ಗಮನಾರ್ಹ ಅಂಶ. ಸರ್ಕಾರಿ ಕಾಮಗಾರಿಗಳಲ್ಲಿ ₹2 ಕೋಟಿವರೆಗಿನ ಗುತ್ತಿಗೆ ಮತ್ತು ₹1 ಕೋಟಿ ವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸಿದ್ದು ಸಿದ್ದರಾಮಯ್ಯ ಸರ್ಕಾರದ ಹಿಂದು ವಿರೋಧಿ ನೀತಿಗೆ ಉದಾಹರಣೆ ಎಂದಿದ್ದಾರೆ.
ನೀರಸವಾದ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ನೀರಸವಾದ ಬಜೆಟ್ ಮಂಡಿಸಿದ್ದಾರೆ. ಜನರ ಆಶಾಭಾವನೆಗಳಿಗೆ ವಿರುದ್ಧವಾದ ಬಜೆಟ್ ಇದಾಗಿದ್ದು, ಸಂಪತ್ತಿನ ಸಮಾನ ಹಂಚಿಕೆ ಎಂಬುದು ಸಿದ್ದರಾಮಯ್ಯ ಸರ್ಕಾರದಲ್ಲಿ ಮರೀಚಿಕೆಯಾಗಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಕೇಂದ್ರ ಸರ್ಕಾರದೆದುರು ವಾದ ಮಂಡಿಸಿದವರು ಇಂದು ಜಿಲ್ಲೆಯ ತೆರಿಗೆ ಪಾಲನ್ನು ಸರಿಯಾದ ಕ್ರಮದಲ್ಲಿ ಹಿಂತಿರುಗಿಸಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಯಾವುದೇ ರೀತಿಯ ಉತ್ತೇಜನ ನೀಡಿಲ್ಲ. ಬೆಲೆ ಏರಿಕೆಗೆ ಕಡಿವಾಣ ಬೀಳಲಿದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಜಿಲ್ಲೆಯ ನಿರ್ಲಕ್ಷ್ಯ: ಈ ಸಲದ ಬಜೆಟ್ ಪ್ರಚಾರಕ್ಕೆ ಸೀಮಿತವಾದ ಬಜೆಟ್ ಆಗಿದ್ದು ಜಿಲ್ಲೆಗೆ ಗುರುತಿಸಬಹುದಾದ ಯಾವುದೇ ದೊಡ್ಡ ಯೋಜನೆಗಳಿಲ್ಲ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆಗೋಸ್ಕರ ಮಂಡಿಸಿದ ಬಜೆಟ್‌ನಂತೆ ತೋರುತ್ತಿದೆ ಎಂದು ಯುವಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹೇಳಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಪೂರಕ: ಹೆದ್ದಾರಿ ಹಾಗೂ ಗ್ರಾಮಾಂ ತರ ರಸ್ತೆಗಳ ಅಭಿವೃದ್ಧಿಗೆ ಅನುದಾನ, ಮಹಿಳಾ ಸಬಲೀಕ ರಣಕ್ಕಾಗಿ ಯೋಜನೆಗಳ ಘೋಷಣೆ, ಪುತ್ತೂರಿಗೆ ಮೆಡಿಕಲ್ ಕಾಲೇಜ್, ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು, ತೋಟಗಾರಿಕೆ, ನೀರಾವರಿ, ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಇಲಾಖಾವಾರು ಅನುದಾನ ಬಿಡುಗಡೆ ಮಾಡುವ ಮೂಲಕ ಈ ಬಜೆಟ್ ಸಮಗ್ರ ಅಭಿ ವೃದ್ಧಿಗೆ ಪೂರಕವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಜನಪರ ಬಜೆಟ್: ಈ ಬಾರಿಯ ಬಜೆಟ್ ಸರ್ವರಿಗೆ ಸಮಪಾಲು ಸಮಬಾಳು ನೀಡುವುದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ₹51 ಸಾವಿರ ಕೋಟಿ ಅನುದಾನವನ್ನು ಮೀಸಲಿಡುವುದರ ಮೂಲಕ ವಿರೋಧ ಪಕ್ಷಗಳ ಹೇಳಿಕೆ ಗಳು ಸುಳ್ಳು ಎನ್ನುವುದನ್ನು ಸಿದ್ದರಾಮಯ್ಯ ಅವರು ಸಾಬೀ ತುಪಡಿಸಿದ್ದಾರೆ. ಅವರು ಮಂಡಿಸಿದ ಬಜೆಟ್ ಎಲ್ಲರನ್ನೂ ಒಳಗೊಂಡ ಸಮಗ್ರವಾದ ಬಜೆಟ್ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಕರಾವಳಿಗೆ ಹಾಗೂ ಮೀನುಗಾರ ಸಮುದಾಯಕ್ಕೆ ಭರ್ಜರಿ ಯೋಜನೆಗಳನ್ನು ನೀಡಿರುವ ಸಿದ್ದರಾಮಯ್ಯ ಅವರು ಮಲ್ಪೆಯಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಮೀನುಗಾರಿಕಾ ನೀತಿ ಜಾರಿಗೆ ಪ್ರಯತ್ನ, ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿ, ಸೇರಿದಂತೆ ಹಲವಾರು ಬಂಪರ್ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ಅನುದಾನ: ಬಜೆಟ್‌ನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನ, ಗ್ರಾಮೀಣಾಭಿವೃದ್ಧಿಗೆ ಹಾಗೂ ಉದ್ಯೋಗಾವಕಾಶಕ್ಕೆ ಹೆಚ್ಚಿನ ಒತ್ತು ನೀಡಿ ಇಲಾಖಾವಾರು ಅನುದಾನ ಬಿಡುಗಡೆ ಮಾಡಿರುವುದರಿಂದ ಇದು ಅಭಿವೃದ್ಧಿಗೆ ಪೂರಕ ಬಜೆಟ್ ಎಂದು ಕಾಂಗ್ರೆಸ್ ಉಡುಪಿ ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.
ಪರಿಹಾರಧನ ಹೆಚ್ಚಳ ಶ್ಲಾಘನೀಯ: ಬಜೆಟ್‌ನಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಸ್ವಾಭಾವಿಕ ಮರಣ ಹೊಂದಿದಲ್ಲಿ ನೀಡುವ ಪರಿಹಾರ ಧನವನ್ನು ಈಗಿರುವ ₹75 ಸಾವಿರದಿಂದ ₹1.50 ಲಕ್ಷಕ್ಕೆ ಏರಿಕೆ ಮಾಡಿರುವುದು ಹಾಗೂ ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ ನೀಡುವ ಪರಿಹಾರವನ್ನು ₹5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಿರುವ ತೀರ್ಮಾನವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಹಾಗೂ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ (ಸಿಐಟಿಯು) ಸ್ವಾಗತಿದೆ ಎಂದು ಸಮಿತಿಯ ಮುಖಂಡರಾದ ಸುರೇಶ್ ಕಲ್ಲಾಗರ, ಶೇಖರ ಬಂಗೇರ ಉಡುಪಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಬೈಂದೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.