ಕಾರ್ಕಳ: ತಾಲ್ಲೂಕಿನ ಮುಂಡ್ಕೂರು, ಬಜ್ಪೆ, ಆತ್ರಾಡಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗುಂಡಿಗಳು ತುಂಬಿದ್ದು ದಿನವೂ ವಾಹನ ಸವಾರರು ಪರದಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ಇಡೀ ರಸ್ತೆ ಗುಂಡಿಮಯವಾಗಿದ್ದು ಗುಂಡಿ ತಪ್ಪಿಸಲು ಹೋದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರಿಗೆ ಗೋಳು ತಪ್ಪಿಲ್ಲ.
ಮಳೆ ಬರುವಾಗ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಗುಂಡಿಗಳ ಅರಿವಿಲ್ಲದೆ ನೇರವಾಗಿ ಸಾಗುವ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಅಪಘಾತಕ್ಕೆ ಸಿಲುಕುತ್ತಿದ್ದಾರೆ.
ಬಜ್ಪೆ– ಅತ್ರಾಡಿ ರಾಜ್ಯ ಹೆದ್ದಾರಿಯಲ್ಲಿ ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈನಪೇಟೆ ಹಾಗೂ ಪಡಿತ್ತಾರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಗಾತ್ರದ ಹೊಂಡಗಳಾಗಿದ್ದು, ಚರಂಡಿಯ ವ್ಯವಸ್ಥೆ ಸರಿಯಿಲ್ಲದೇ ಮಳೆಯ ನೀರು ರಸ್ತೆಯಲ್ಲಿ ಹರಿದು ಹಲವಾರು ಅವಾಂತರಗಳಿಗೆ ಕಾರಣವಾಗುತ್ತಿದೆ.
ಈ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಮಳೆಯ ನೀರು ರಸ್ತೆಯಲ್ಲಿ ಹರಿಯುವುದರಿಂದ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿ ಹಲವು ಬಾರಿ ಅಪಘಾತಗಳು ಸಂಭವಿಸಿವೆ.
ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಪಾದಚಾರಿಗಳು, ವಿದ್ಯಾರ್ಥಿಗಳು ಮಳೆಯ ಸಂದರ್ಭದಲ್ಲಿ ರಸ್ತೆಯ ಬದಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಈ ಭಾಗದಲ್ಲಿ ರಾಜ್ಯ ಹೆದ್ದಾರಿ ಕಿರಿದಾಗಿದ್ದು ದಿನನಿತ್ಯ ಅನೇಕ ಘನ ವಾಹನಗಳು ಸಂಚರಿಸುತ್ತಿವೆ. ಮುಂಡ್ಕೂರು ಪಡಿತ್ತಾರ್ ಸೇತುವೆಯಿಂದ ಪೇಟೆಯ ಹೃದಯ ಭಾಗ, ಜೈನಪೇಟೆಯ ತನಕದ ರಸ್ತೆ ವಿಸ್ತರಣೆಯ ಕಾಮಗಾರಿ ಇನ್ನಷ್ಟೇ ಆಗಬೇಕಾಗಿದೆ.
ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ, ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತ ಈ ಕುರಿತು ತುರ್ತಾಗಿ ಸ್ಪಂದಿಸಿ ರಸ್ತೆ ವಿಸ್ತರಣೆ ಹಾಗೂ ಹೊಂಡಗಳ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ತುಂಬಿಕೊಂಡಿರುವುದರಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಮಳೆ ಬೀಳುವ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಕೂಡ ತೊಂದರೆಯಾಗುತ್ತಿದೆಹರೀಶ್ ಕುಲಾಲ್ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.