ADVERTISEMENT

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ₹ 12.5 ಲಕ್ಷ ಗೆದ್ದ ಉಡುಪಿಯ ರವಿ ಕಟಪಾಡಿ

ಬಹುಮಾನದ ಹಣ ಬಡ ಮಕ್ಕಳ ಚಿಕಿತ್ಸೆಗೆ ವ್ಯಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:30 IST
Last Updated 16 ಜನವರಿ 2021, 19:30 IST
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಉಡುಪಿಯ ರವಿ ಕಟಪಾಡಿ ಅಮಿತಾಬ್ ಬಚ್ಚನ್ ಅವರಿಗೆ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು.
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಉಡುಪಿಯ ರವಿ ಕಟಪಾಡಿ ಅಮಿತಾಬ್ ಬಚ್ಚನ್ ಅವರಿಗೆ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು.   

ಉಡುಪಿ: ಅಷ್ಠಮಿಗೆ ವಿಭಿನ್ನ ವೇಷ ಧರಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಬಡ ಮಕ್ಕಳ ಅನಾರೋಗ್ಯ ವೆಚ್ಚ ಭರಿಸುತ್ತಿದ್ದ ಉಡುಪಿಯ ರವಿ ಕಟಪಾಡಿ ಈ ಬಾರಿ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಗೆದ್ದ ₹ 12.5 ಲಕ್ಷವನ್ನೂ ಬಡ ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ವ್ಯಯಿಸಲು ನಿರ್ಧರಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ‘ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್‌ ಬನೇಗಾ ಕರೊಡ್‌ಪತಿ ಕರ್ಮವೀರ್‌ ವಿಶೇಷ ಸಂಚಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಹಾಗೂ ಗೆದ್ದ ಹಣವನ್ನು ಮತ್ತೆ ಸಮಾಜಕ್ಕೆ ವಿನಿಯೋಗಿಸುವ ಸದವಕಾಶ ದೊರೆತಿರುವುದಕ್ಕೆ ಖುಷಿಯಾಗಿದೆ ಎಂದರು.‌

ಕಾರ್ಯಕ್ರಮದಲ್ಲಿ ಬಾಬಿ ಬೆಹನ್‌ ಎಂಬ ಸ್ಪರ್ಧಿಯ ಜತೆಗೂಡಿ ₹ 25 ಲಕ್ಷ ಬಹುಮಾನ ಗೆದ್ದಿದ್ದೇನೆ. ತೆರಿಗೆ ಕಡಿತವಾಗಿ ಉಳಿಕೆ ಮೊತ್ತವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡುವುದಾಗಿ ವಾಹಿನಿಯವರು ತಿಳಿಸಿದ್ದಾರೆ. ಹಣ ಬಂದ ಕೂಡಲೇ ಬಡ ಮಕ್ಕಳ ಚಿಕಿತ್ಸೆಗೆ ನೆರವು ನೀಡುವುದಾಗಿ ಘೋಷಿಸಿದರು.

ADVERTISEMENT

ಕೌನ್‌ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸುವಂತೆ ಕರೆ ಬಂದಾಗ ಹಿಂದಿ, ಇಂಗ್ಲೀಷ್‌ ಬಾರದ ಕಾರಣಕ್ಕೆ ಮೊದಲು ನಿರಾಕರಿಸಿದೆ. ಮತ್ತೆ ಕರೆ ಮಾಡಿ ಕಾರ್ಯಕ್ರಮದ ಸಮಾಜಮುಖಿ ಉದ್ದೇಶ ಹಾಗೂ ಭಾಷೆಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದಾಗ ಒಪ್ಪಿಕೊಂಡೆ. ನಂತರ ವಾಹಿನಿಯವರು ಉಡುಪಿಗೆ ಬಂದು ಕಟಪಾಡಿ, ಮಲ್ಪೆ, ಕಾಪು ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಸಿದರು. ಕಾರ್ಯಕ್ರಮಕ್ಕಾಗಿ ಮತ್ತೊಮ್ಮೆ ವೇಷ ಧರಿಸಿ ಪ್ರದರ್ಶನ ನೀಡಬೇಕಾಯಿತು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಖ್ಯಾತ ನಟ ಅನುಪಮ್ ಖೇರ್‌ ಅವರೊಂದಿಗೆ ಒಡನಾಡುವ ಅವಕಾಶ ದೊರೆಯಿತು. ಮನಸ್ಸಿನೊಳಗಿದ್ದ ಗೊಂದಲಗಳನ್ನು ಅವರು ನಿವಾರಿಸಿ ಸ್ಪರ್ಧೆಗೆ ಸಜ್ಜುಗೊಳಿಸಿದರು. ಅಮಿತಾಬ್ ಎದುರಿಗೆ ಹಾಟ್‌ ಸೀಟ್‌ನಲ್ಲಿ ಕುಳಿತಾಗ ರೋಮಾಂಚನವಾಯಿತು ಎಂದು ಅನುಭವ ಹಂಚಿಕೊಂಡರು.

ಸ್ಪರ್ಧೆಯಲ್ಲಿ ಇಂಗ್ಲೀಷ್‌ ಹಾಗೂ ಹಿಂದಿ ಪ್ರಶ್ನೆಗಳು ಅರ್ಥವಾಗಲಿಲ್ಲ. ಅನುಪಮ್ ಖೇರ್‌ ಪ್ರಶ್ನೆಗಳನ್ನು ಬಿಡಿಸಿ ಹೇಳಿದಾಗ ಅರ್ಥವಾಯಿತು. 7 ಪ್ರಶ್ನೆಗಳಿಗೆ ಸರಿ ಉತ್ತರ ನೀಡುವಷ್ಟರಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು. ಅಷ್ಟರಲ್ಲಿ ₹ 25 ಲಕ್ಷ ಗೆದ್ದಾಗಿತ್ತು. ಸಹ ಸ್ಪರ್ಧಿ ಬಾಬಿ ಬೆಹನ್‌ ಅವರಿಗೆ ₹ 12.5 ಲಕ್ಷ ಹಾಗೂ ನನಗೆ ₹ 12.5 ಲಕ್ಷ ಹಂಚಲಾಯಿತು ಎಂದರು ರವಿ.

ಅರ್ಧ ಕೋಟಿ ನೆರವು:ಉಡುಪಿಯ ಕಟಪಾಡಿಯ ರವಿ ಕಟ್ಟಡದ ಸೆಂಟ್ರಿಂಗ್ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕ. 2014ರಿಂದ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ವಿಭಿನ್ನ ವೇಷ ಧರಿಸುವ ರವಿ ಇದುವರೆಗೂ ಸಾರ್ವಜನಿಕರಿಂದ ಸಂಗ್ರಹಿಸಿದ ₹ 54.5 ಲಕ್ಷ ದೇಣಿಗೆಯನ್ನು 12 ವರ್ಷದೊಳಗಿನ ಬಡ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ.

‘ತುಳು ಮಾತನಾಡಿದ ಬಚ್ಚನ್‌‌’

ಕರಾವಳಿಯ ಹೆಮ್ಮೆಯ ತುಳು ಭಾಷೆಯನ್ನು ಅಮಿತಾಬ್‌ ಬಾಯಲ್ಲಿ ಕೇಳಬೇಕು ಎಂಬ ಆಸೆ ಈಡೇರಿತು. ತುಳು ಮಾತನಾಡುವಂತೆ ಬೇಡಿಕೆ ಇಟ್ಟಾಗ ಖುಷಿಯಿಂದ ಒಪ್ಪಿಕೊಂಡ ಅವರು, ‘ಉಡುಪಿ ಬೊಕ್ಕ ಕುಡ್ಲದ ಮಾತಾ ಜನಕ್ಲೆಂಗ ಎನ್ನ ಮೋಕ್ಯದ ನಮಸ್ಕಾರ’ ಎಂದು ಶುಭ ಹಾರೈಸಿದರು ಎಂದರು ರವಿ ಕಟಪಾಡಿ.

ಅಕ್ಕನ ಮಗಳ ಚಿಕಿತ್ಸಾ ವೆಚ್ಚ ಭರಿಸಲಿಲ್ಲ !

ಬಡ ಮಕ್ಕಳ ನೆರವಿಗೆ ಧಾವಿಸುವ ಅವಕಾಶ ದೊರೆತರೂ ಸ್ವಂತ ಅಕ್ಕನ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗಲಿಲ್ಲ ಎಂದು ರವಿ ಕಟಪಾಡಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಸುರಿಸಿದರು. ಭಾವ ತೀರಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅಕ್ಕ ಬಾಯಿಬಿಟ್ಟು ಮಗಳ ಚಿಕಿತ್ಸೆಗೆ ನೆರವು ಕೇಳಿದರೂ ಕೊಡಲಿಲ್ಲ. 12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಆರ್ಥಿಕ ನೆರವು ಕೊಡಬೇಕು ಸಿದ್ಧಾಂತವನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬಂದಿದ್ದರಿಂದ ಬಿಡಿಗಾಸು ಕೂಡ ನೀಡಲಿಲ್ಲ. ಈಚೆಗೆ ಚಿಕಿತ್ಸೆಗೆ ಸ್ಪಂದಿಸದೆ ಅಕ್ಕನ ಮಗಳು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಮೃತಪಟ್ಟಳು ಎಂದು ರವಿ ಕಣ್ಣೀರಾದರು.

ಸುದ್ದಿಗೋಷ್ಠಿಯಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ಬಳಗದ ಮಹೇಶ್‌ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.