ADVERTISEMENT

ಉಚ್ಚಿಲದಲ್ಲಿ ಜಿಲ್ಲಾ ರೈತ ಸಮ್ಮೇಳನ ಫೆ.11ರಂದು

ಭಾರತೀಯ ಕಿಸಾನ್ ಸಂಘದಿಂದ ಕರಾವಳಿ ರೈತರ ಸಮಸ್ಯೆ ಕುರಿತು ಚರ್ಚೆ, ಸಂವಾದ, ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 13:03 IST
Last Updated 8 ಫೆಬ್ರುವರಿ 2023, 13:03 IST
ಭಾರತೀಯ ಕಿಸಾನ್ ಸಂಘದ ವತಿಯಿಂದ ಫೆ11ರಂದು ಉಚ್ಚಿಲದಲ್ಲಿ ನಡೆಯುವ ಜಿಲ್ಲಾ ರೈತ ಸಮ್ಮೇಳನ ಕುರಿತು ಬುಧವಾರ ಸಂಘದ ಕಚೇರಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಜಪ್ತಿ ಮಾತನಾಡಿದರು
ಭಾರತೀಯ ಕಿಸಾನ್ ಸಂಘದ ವತಿಯಿಂದ ಫೆ11ರಂದು ಉಚ್ಚಿಲದಲ್ಲಿ ನಡೆಯುವ ಜಿಲ್ಲಾ ರೈತ ಸಮ್ಮೇಳನ ಕುರಿತು ಬುಧವಾರ ಸಂಘದ ಕಚೇರಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಜಪ್ತಿ ಮಾತನಾಡಿದರು   

ಉಡುಪಿ: ಭಾರತೀಯ ಕಿಸಾನ್ ಸಂಘದ ವತಿಯಿಂದ ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನು ಕಾಪು ತಾಲ್ಲೂಕಿನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಫೆ.11ರಂದು ಆಯೋಜಿಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಜಪ್ತಿ ತಿಳಿಸಿದರು.

ಸಂಘದ ಕಚೇರಿಯಲ್ಲಿ ಮಾತನಾಡಿ 11ರಂದು ಬೆಳಿಗ್ಗೆ 10ಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ.ಕೋಕರೆ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಹಾಪ್‍ಕಾಮ್ಸ್‌ ಅಧ್ಯಕ್ಷ ಸೀತಾರಾಮ ಗಾಣಿಗ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ADVERTISEMENT

ಪೆರಂಪಳ್ಳಿ ಜಿ.ವಾಸುದೇವ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗೋಷ್ಠಿಗಳಲ್ಲಿ ವಿವಿಧ ಕೃಷಿ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ.ಧನಂಜಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಉಪನ್ಯಾಸ ನೀಡಲಿದ್ದಾರೆ.

ಕೃಷಿ ವಿಚಾರ ಗೋಷ್ಠಿಗಳ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಅರುಣ ಕುಮಾರ್ ವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಪದಾಧಿಕಾರಿಗಳಾದ ನಾರಾಯಣ ಸ್ವಾಮಿ ಹಾಗೂ ರಮೇಶ ರಾಜು, ಸಂಘದ ಮುಖಂಡರಾದ ಶ್ರೀನಿವಾಸ್ ಭಟ್‌, ನವೀನ್‌ಚಂದ್ರ ಜೈನ್‌, ಮಹಾಬಲ ನಾಯರಿ ಆಲೂರು, ಸುಂದರ ಶೆಟ್ಟಿ, ಅನಂತ ಪದ್ಮನಾಭ ಉಡುಪ, ಮೋಹನ್‌ದಾಸ್‌ ಅಡ್ಯಂತಾಯ ಉಪಸ್ಥಿತರಿರಲಿದ್ದಾರೆ ಎಂದು ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‍ಚಂದ್ರ ಜೈನ್, ಪದಾಧಿಕಾರಿಗಳಾದ ಸೀತಾರಾಮ ಗಾಣಿಗ, ಆಸ್ತಿಕ ಶಾಸ್ತ್ರೀ, ದೀಪಕ್ ಪೈ, ಚಂದ್ರಹಾಸ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಶಾಂತ್ ಕುಮಾರ್, ಅನಂತ ಪದ್ಮನಾಭ ಉಡುಪ, ನಿರ್ಮಲ ಇದ್ದರು.

ಕರಾವಳಿ ರೈತರ ಸಮಸ್ಯೆ ಕುರಿತು ಚರ್ಚೆ

ಕರಾವಳಿಯ ರೈತರ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ, ಸಂವಾದಗಳು ನಡೆಯಲಿದ್ದು ಕೊನೆಯಲ್ಲಿ ಪ್ರಮುಖವಾಗಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಪರಿಹಾರ ಹಾಗೂ ಪರಿಹಾರ ಧನ ಹೆಚ್ಚಳ, ಕಟಾವಿಗೆ ಮುನ್ನು ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ತೆರೆಯುವುದು, ನೆರೆ ಹಾನಿ ಪರಿಹಾರ ಧನ ಹೆಚ್ಚಳ, ಮಂಗಗಳ ಹಾವಳಿ ತಡೆಗೆ ಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭಾಕಿಸಂ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‍ಚಂದ್ರ ಜೈನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.