ADVERTISEMENT

ವೈದ್ಯಕೀಯ ವೃತ್ತಿಯಲ್ಲಿ ಸೇವೆಯೇ ಆದ್ಯತೆ: ಜಯಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:36 IST
Last Updated 27 ಅಕ್ಟೋಬರ್ 2025, 5:36 IST
<div class="paragraphs"><p>ಕುಂದಾಪುರದ ಶ್ರೀಸಾಯಿ ಆಸ್ಪತ್ರೆಯಲ್ಲಿ ಕೆಎಂಸಿ ಆಸ್ಪತ್ರೆ ಜೊತೆಯಾಗಿ ಆರಂಭ ಮಾಡಿದ ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕ, ಟ್ರಾಮ ಕೇಂದ್ರವನ್ನು ಉದ್ಘಾಟಿಸಲಾಯಿತು</p></div>

ಕುಂದಾಪುರದ ಶ್ರೀಸಾಯಿ ಆಸ್ಪತ್ರೆಯಲ್ಲಿ ಕೆಎಂಸಿ ಆಸ್ಪತ್ರೆ ಜೊತೆಯಾಗಿ ಆರಂಭ ಮಾಡಿದ ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕ, ಟ್ರಾಮ ಕೇಂದ್ರವನ್ನು ಉದ್ಘಾಟಿಸಲಾಯಿತು

   

ಕುಂದಾಪುರ: ‘ಜೀವ ಉಳಿಸುವ ವೈದ್ಯರು, ರೋಗಿಗಳ ಪಾಲಿಗೆ ಭಗವಂತನ ಸಾದೃಶ್ಯ ಹೊಂದಿರುತ್ತಾರೆ. ಮಾನವೀಯ ಮೌಲ್ಯಗಳ ಸಾಕಾರ ಗುಚ್ಛದಂತೆ ಇರುವ ವೈದ್ಯಕೀಯ ವೃತ್ತಿಯಲ್ಲಿ ಸೇವೆಯೇ ಆದ್ಯತೆಯಾಗಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಶೆಟ್ಟಿ ಹೇಳಿದರು.

ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯ ಶ್ರೀಸಾಯಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಜೊತೆಯಾಗಿ ಆರಂಭ ಮಾಡಿದ ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕ ಹಾಗೂ ಟ್ರಾಮ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಎಷ್ಟೋ ಜೀವಗಳು ಉಸಿರು ನಿಲ್ಲಿಸಿದ ದೃಷ್ಟಾಂತ ನಮ್ಮ ಮುಂದಿವೆ. ತಂತ್ರಜ್ಞಾನ ಬೆಳವಣಿಗೆಯ ಜೊತೆ ಅಪಘಾತಗಳು, ರೋಗಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಪ್ರತಿಬ ರೋಗಿಗೂ ಪರಿಣತ ವೈದ್ಯರ ಚಿಕಿತ್ಸೆಯ ಅಗತ್ಯ ಇದೆ. ಈ ನಿಟ್ಟಿನಲ್ಲಿ ಬಹುತೇಕ ಗ್ರಾಮೀಣ ಭಾಗಗಳನ್ನು, ಕರಾವಳಿ ಪ್ರದೇಶಗಳನ್ನು ಹೊಂದಿರುವ ಕುಂದಾಪುರದಲ್ಲಿ ವೈದ್ಯಕೀಯ ಸೇವೆಯ ತುರ್ತು ಚಿಕಿತ್ಸಾ ಘಟಕ ಆರಂಭವಾಗಿರುವುದು ಸ್ತುತ್ಯರ್ಹ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್, ಕೋವಿಡ್–19 ಸಂದರ್ಭದಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಸ್ಪಂದನೆ ನೀಡಿರುವ ನ್ಯೂ ಮೆಡಿಕಲ್ ಮತ್ತು ಕೆಎಂಸಿ ಆಸ್ಪತ್ರೆ ಜೊತೆಯಾಗಿ ಈ ಕೇಂದ್ರ ಆರಂಭಿಸಿರುವುದು, ಇಲ್ಲಿನ ಅನುಭವಿ ವೈದ್ಯರ ತಂಡ, ಉತ್ತಮ ತಂತ್ರಜ್ಞಾನ ವ್ಯವಸ್ಥೆಗಳು ಜನರ ಭರವಸೆ ಹೆಚ್ಚಿಸಿವೆ. ತುರ್ತು ಸಂದರ್ಭಗಳಲ್ಲಿ ನಾವೇ ವೈದ್ಯರಾಗುವ ಬದಲು, ಚಿಕಿತ್ಸಾ ತೀರ್ಮಾನ ತೆಗೆದುಕೊಳ್ಳುವ ಅವಕಾಶವನ್ನು ವೈದ್ಯರಿಗೆ ಬಿಡಬೇಕು. ಪೊಲೀಸ್ ಇಲಾಖೆ ಸಿಬ್ಬಂದಿಗೂ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ತಜ್ಞರಿಂದ ತರಬೇತಿ ನೀಡುವ ಆಲೋಚನೆ ಇದೆ ಎಂದರು

ಮಂಗಳೂರು ಕೆಎಂಸಿ ಆಸ್ಪತ್ರೆಯ ತುರ್ತು ಮೆಡಿಸಿನ್ ವಿಭಾಗದ ಸಮಾಲೋಚಕ, ಮುಖ್ಯಸ್ಥ ಡಾ.ಚೀಧು ರಾಧಾಕೃಷ್ಣನ್ ಮಾತನಾಡಿ, ಕೇರಳ ಹಾಗೂ ಕರ್ನಾಟಕದಲ್ಲಿ ಐದು ತುರ್ತು ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ಹೃದಯ, ಪಾರ್ಶ್ವವಾಯು, ಅಪಘಾತ, ಹಾವು ಕಡಿತ ಮುಂತಾದ ತುರ್ತು ಸಂದರ್ಭದಲ್ಲಿ ಗೋಲ್ಡನ್ ಅವರ್‌ನಲ್ಲಿ ನೀಡುವ ಚಿಕಿತ್ಸೆ ಮುಖ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಸ್ಥಳ, ಸಮಯ, ಚಿಕಿತ್ಸಕರ ಅನುಭವ ಪ್ರಾಮುಖ್ಯ. ಈ ಎಲ್ಲಾ ಅಂಶಗಳನ್ನು ಕೇಂದ್ರೀಕರಿಸಿಕೊಂಡು ಕುಂದಾಪುರದಲ್ಲಿ ತುರ್ತು ಚಿಕಿತ್ಸಾ ಘಟಕ ಪ್ರಾರಂಭಿಸಲಾಗಿದೆ. ಪರಿಸರದ ಸಂಘ– ಸಂಸ್ಥೆಗಳ ಸಹಕಾರದಲ್ಲಿ ತುರ್ತು ಸಂದರ್ಭದಲ್ಲಿ ನೀಡುವ ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತರಬೇತಿ ನೀಡಲು ಎರಡೂ ಸಂಸ್ಥೆಗಳು ಕ್ರಮ ವಹಿಸಲಿವೆ ಎಂದು ತಿಳಿಸಿದರು.

ನ್ಯೂ ಮೆಡಿಕಲ್ ಸೆಂಟರ್‌ನ ಡಾ.ರಂಜನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ವಲಯದ ಯೂನಿಯನ್ ಬ್ಯಾಂಕ್‌ ಉಪ ವಲಯ ಮುಖ್ಯಸ್ಥ ಸತ್ಯಬ್ರತೊ ಬಾಧುರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ. ಪ್ರೇಮಾನಂದ, ಐಎಂಎ ಕುಂದಾಪುರ ಘಟಕದ ಅಧ್ಯಕ್ಷ ಡಾ.ಬಾಲಕೃಷ್ಣ ಶೆಟ್ಟಿ, ಮಂಗಳೂರು ಕೆಎಂಸಿ ಆಸ್ಪತ್ರೆಯ ಮಾರುಕಟ್ಟೆ ಮುಖ್ಯಸ್ಥ ರಾಕೇಶ್ ದರ್ಶನ್ ಮಾತನಾಡಿದರು.

ಮಂಡಾಡಿ ಹೊರವರ ಮನೆ ದಿ.ರತ್ನಾಕರ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಮಂಗಳೂರು ಕೆಎಂಸಿ ಆಸ್ಪತ್ರೆ, ಕುಂದಾಪುರ ಶ್ರೀಸಾಯಿ ಆಸ್ಪತ್ರೆ ವತಿಯಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಕೊಡುಗೆ ನೀಡಲಾದ 8 ಬ್ಯಾರಿಕೇಡ್‌ಗಳನ್ನು ಡಾ.ರಂಜನ್ ಶೆಟ್ಟಿ ಅವರು, ಎಸ್‌ಪಿ ಹರಿರಾಮ್‌ ಶಂಕರ್ ಅವರಿಗೆ ಹಸ್ತಾಂತರಿಸಿದರು. ತುರ್ತು ಚಿಕಿತ್ಸಾ ಕೇಂದ್ರದ ದೂರವಾಣಿ ಸಂಖ್ಯೆ 8971730333 ಲೋಕಾರ್ಪಣೆ ಮಾಡಲಾಯಿತು. ವಿಜಯ್ ಶೆಟ್ಟಿ ಸಲ್ವಾಡಿ, ಚಿತ್ತೂರು ಮಂಜಯ್ಯ ಶೆಟ್ಟಿ, ಮೇಘನಾ ರಂಜನ್ ಶೆಟ್ಟಿ, ಡಾ.ರಾಮ್‌ಪ್ರಸಾದ್, ಡಾ.ಶ್ರೀಕಾಂತ್ ಶೆಟ್ಟಿ, ಡಾ.ಸಿದ್ಧಾರ್ಥ ಶೆಟ್ಟಿ, ಡಾ.ಸಂದೀಪ್, ಡಾ.ವಿಶ್ವನಾಥ ಹೆಬ್ಬಾರ್ ಭಾಗವಹಿಸಿದ್ದರು. ಸುಹಾಸ್ ಮಲ್ಯ ಪ್ರಾರ್ಥಿಸಿದರು. ರಾಜೇಶ್ ಕುಂದಾಪುರ ನಿರೂಪಿಸಿದರು. ಡಾ.ಪ್ರಕೃತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.