ADVERTISEMENT

ಕೆಎಂಸಿಯಲ್ಲಿ ಸಂಕೀರ್ಣ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ

ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಡೆಯುವ ಶಸ್ತ್ರಚಿಕಿತ್ಸೆ ಮಣಿಪಾಲದಲ್ಲಿ: ಡಾ.ನವೀನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 15:00 IST
Last Updated 3 ಜನವರಿ 2021, 15:00 IST
ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ.
ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ.   

ಉಡುಪಿ: ಮಣಿಪಾಲದ ಕಸ್ತೂರ ಬಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ದೇಶದ ಕೆಲವೇ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ನಡೆಸುವ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಯಶಸ್ವಿಯಾಗಿದೆ ಎಂದು ಕ್ಯಾನ್ಸರ್ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾ.ನವೀನ್‌ ಕುಮಾರ್ ಹೇಳಿದರು.

ನಗರದ ಓಷನ್‌ ಪರ್ಲ್‌ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ವಾಸನಾಳದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಕ್ಲಿಷ್ಟ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದ್ದು, ಕ್ಯಾನ್ಸರ್ ಗಡ್ಡೆಯ ಜೊತೆಗೆ ಶ್ವಾಸನಾಳದ ಭಾಗವನ್ನು ತೆಗೆದುಹಾಕಲಾಗುತ್ತದೆ. ಕೆಎಂಸಿಯಲ್ಲಿ ಇತ್ತೀಚೆಗೆ 70 ವರ್ಷದ ವೃದ್ಧ ಸೇರಿದಂತೆ ನಾಲ್ವರಿಗೆ ಟ್ರಾಕಿಯೊಬ್ರಾಂಕಿಯಲ್ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ರೋಗಿಗಳು ಆರೋಗ್ಯವಾಗಿದ್ದಾರೆ ಎಂದರು.

ಈಚೆಗೆ ಎದೆಯೊಳಗಿನ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗಡ್ಡೆ ತೆಗೆಯುವ ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ನಡೆದಿವೆ. 15 ವರ್ಷದ ಬಾಲಕನಿಗೆ 3 ಕೆಜಿ ಗಡ್ಡೆಯನ್ನು 10 ಗಂಟೆಗಳ ಸುಧೀರ್ಘ ಶಸ್ತ್ರಚಿಕಿತ್ಸೆ ಮೂಲಕ ತೆಗೆದು, ಎದೆಯ ಮೂಳೆಯನ್ನು ಕೃತಕ ಮೂಳೆಯೊಂದಿಗೆ ಪುನರ್ನಿಮಿಸಲಾಯಿತು. 15 ವರ್ಷದ ಬಾಲಕಿಗೆ ಕುತ್ತಿಗೆಯನ್ನು ಒಳಗೊಂಡ ದೊಡ್ಡ ರಕ್ತಸ್ರಾವದ ಗಡ್ಡೆಯನ್ನು 14 ಗಂಟೆ ಸುಧೀರ್ಘ ಶಸ್ತ್ರಚಿಕಿತ್ಸೆ ಮೂಲಕ 5 ಕೆ.ಜಿ ಗಡ್ಡೆ ತೆಗೆದುಹಾಕಲಾಗಿದೆ. ಇಬ್ಬರು ಆರೋಗ್ಯವಾಗಿದ್ದಾರೆ ಎಂದರು.

ADVERTISEMENT

25 ವರ್ಷದ ಅನ್ನನಾಳ ಕ್ಯಾನ್ಸರ್ ರೋಗಿಗೆ ಕೀಹೋಲ್ ಸಂಕೀರ್ಣ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿ ಅನ್ನನಾಳ ಕರುಳನ್ನು ಬಳಸಿ ಪುನರ್‌ ನಿರ್ಮಿಸಲಾಯಿತು. ಹೈಪಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೋಥೆರಪಿ ವಿಧಾನದೊಂದಿಗೆ 4ನೇ ಹಂತದ ಜಠರ, ದೊಡ್ಡ ಕರುಳು, ಕರುಳಿನ ಕೊನೆಯ ಭಾಗ ಮತ್ತು ಅಂಡಾಶಯದ ಕ್ಯಾನ್ಸರ್‌ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಡಾ.ನವೀನ ಕುಮಾರ್ ಹೇಳಿದರು.

13 ವರ್ಷದ ಬಾಲಕಿಗೆ ತೊಡೆಯ ಮೂಳೆಯ ಕ್ಯಾನ್ಸರ್‌ಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಮೂಳೆಯ ಕ್ಯಾನ್ಸರ್ ಭಾಗ ತೆಗೆದು ಹೆಚ್ಚಿನ ರೇಡಿಯೊಥೆರಪಿಗೆ ಒಳಪಡಿಸಿ ಮರುಜೋಡಣೆ ಮಾಡಲಾಗಿದೆ. 50 ವರ್ಷದ ಮಹಿಳೆಗೂ ಸ್ಯಾಕ್ರೊ-ಇಲಿಯಾಕ್ ಜಂಟಿ ಮೂಳೆಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ರೋಗಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಮಣಿಪಾಲ ಸಮಗ್ರ ಆರೈಕೆ ಕೇಂದ್ರದ ಸಂಯೋಜಕ ಡಾ.ನವೀನ್ ಎಸ್.ಸಲಿನ್ಸ್ ಮಾತನಾಡಿ, ಗುಣಮಟ್ಟದ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ದಾದಿಯರ ಸಮರ್ಥ ತಂಡದಿಂದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತಿದೆ ಎಂದರು.

ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ ಹೆಗ್ಡೆ ಮಾತನಾಡಿ, ‘ಪ್ರತಿಷ್ಠಿತ ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತರಬೇತಿ ಹೊಂದಿದ ತಂಡ ಗುಣಮಟ್ಟದ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆ ನಡಸುತ್ತಿದೆ. ಕೆಎಂಸಿ ಅಂತರರಾಷ್ಟ್ರೀಯ ಕ್ಯಾನ್ಸರ್ ಕೇಂದ್ರಗಳಿಗೆ ಸಮಾನವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, ರೋಗಿಗಳಲ್ಲಿ ಭರವಸೆ ಮೂಡಿಸಿದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.

ಡಾ.ಕಾರ್ತಿಕ್ ಉಡುಪ, ಡಾ.ಸುಮಿತ್ ಎಸ್.ಮಾಲಾಪುರೆ, ಡಾ.ವಾಸುದೇವ ಭಟ್, ಡಾ.ನವಾಜ್ ಉಸ್ಮಾನ್, ಡಾ.ಕೇಶವ ರಾಜನ್, ಸುಧಾಕರ್ ಪ್ರಭು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.