ADVERTISEMENT

ಕೊಲ್ಲೂರಿನಲ್ಲಿ ನವರಾತ್ರಿ ಸಡಗರ

ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತದ ದಂಡು– ಅ.4ರಂದು ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:33 IST
Last Updated 27 ಸೆಪ್ಟೆಂಬರ್ 2022, 4:33 IST
ನವರಾತ್ರಿ ಉತ್ಸವ ಪ್ರಯುಕ್ತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೊರಾಂಗಣ ವಿದ್ಯುತ್‌ ದೀಪಗಳಿಂದ ಅಲಂಕಾರದಿಂದ ಕಂಗೊಳಿಸುತ್ತಿದೆ.
ನವರಾತ್ರಿ ಉತ್ಸವ ಪ್ರಯುಕ್ತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೊರಾಂಗಣ ವಿದ್ಯುತ್‌ ದೀಪಗಳಿಂದ ಅಲಂಕಾರದಿಂದ ಕಂಗೊಳಿಸುತ್ತಿದೆ.   

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ‌ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಧ್ವಜ ಕಂಬದಲ್ಲಿ ಇರುವ ಕಂಬದ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿಯ ಉತ್ಸವಾಚರಣೆಗೆ ಚಾಲನೆ ನೀಡ ಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಡಾ.ಅತುಲ್‌ಕುಮಾರ ಶೆಟ್ಟಿ. ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ್ ಇದ್ದರು.

ದೇವಸ್ಥಾನದಲ್ಲಿ ಅ.5ರ ವರೆಗೆ ಉತ್ಸವ ನಡೆಯಲಿವೆ. ದಿನಂಪ್ರತಿ ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ, ನವರಾತ್ರಿ ಅಂಗವಾಗಿ ಸುಹಾಸಿನಿಯರ ಪೂಜೆ ಹಾಗೂ ಇತರ ವಿಶೇಷ ಪೂಜೆ ಹಾಗೂ ಉತ್ಸವಗಳು ನಡೆಯಲಿದೆ. ದೇವಳದ ಸ್ವರ್ಣಮುಖಿ ಮಂಟಪದಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30ರ ವರೆಗೆ ದೇಶದ ವಿವಿಧ ಭಾಗದ ಕಲಾ ತಂಡ ಗಳಿಂದ ಸೇವಾ ರೂಪವಾಗಿ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮ ನಡೆಯಲಿವೆ.

ADVERTISEMENT

ಅ.4ರಂದು ಮಹಾ ನವಮಿಯ ಪ್ರಯುಕ್ತ ಬೆಳಿಗ್ಗೆ 11.30 ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ 1ಕ್ಕೆ ರಥೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ದೇವರ ರಥದಿಂದ ಚೆಲ್ಲುವ ನಾಣ್ಯ ಹಾಗೂ ಇತರ ವಸ್ತುಗಳನ್ನು ಪಡೆದುಕೊಳ್ಳಲು ಸಾವಿರಾರು ಭಕ್ತರು ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

ಅ.5ರಂದು ವಿಜಯ ದಶಮಿಯ ಪ್ರಯುಕ್ತ ಮುಂಜಾನೆಯಿಂದ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಸಂಜೆ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ.

ದೇವಸ್ಥಾನವನ್ನು ವಿದ್ಯುತ್ ದೀಪ ಹಾಗೂ ಹೂವಿನಿಂದ ಅಲಂಕರಿಸಲಾಗಿದೆ. ದೇವಿಯ ದರ್ಶನಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಿದ್ದಾರೆ. ದೇವಸ್ಥಾನದ ಪರಿಸರ ಹಾಗೂ ಕೊಲ್ಲೂರು ಪೇಟೆಯಲ್ಲಿ ಜನಸಂದಣಿ ಹೆಚ್ಚಾಗಿದೆ. ಅನ್ನ ಸಂತರ್ಪಣೆ, ಪ್ರಸಾದ‌ ವಿತರಣೆ, ಸೇವೆ ಸೇರಿದಂತೆ ಉತ್ಸವದ ಯಶಸ್ಸಿಗೆ ದೇಗುಲದ ಆಡಳಿತ ವ್ಯವಸ್ಥೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ: ದೇವಳದ ಸ್ವರ್ಣಮುಖಿ ಮಂಟಪದಲ್ಲಿ 9 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸೇವಾ ಕಾರ್ಯಕ್ರಮಗಳಿಗೆ ಸೋಮವಾರ ಬೆಳಿಗ್ಗೆ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್, ಗಣೇಶ್ ಕಿಣಿ ಬೆಳ್ವೆ, ಡಾ.ಅತುಲ್‌ಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡಾ ಇದ್ದರು.

ಅ.5 ರಂದು ಬೆಳಿಗ್ಗೆ 7 ಗಂಟೆಯಿಂದ ಮಲ್ಪೆ ಕೊಳ ಫ್ರೆಂಡ್ಸ್ ಹಾಗೂ ಫ್ರೆಂಡ್ಸ್ ಕೊಲ್ಲೂರು ಇವರ ನೇತೃತ್ವದಲ್ಲಿ ಆಕರ್ಷಕ ಹುಲಿವೇ‍ಷ ಕುಣಿತ ಸೇವೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.