ಹೆಬ್ರಿ: ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಬುಧವಾರ ಮತ್ತು ಗುರುವಾರ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ನಡೆಯಿತು.
ಕಾರ್ಯಕ್ರಮ ಅಂಗವಾಗಿ ಅರ್ಧನಾರೀಶ್ವರ ದೇವಸ್ಥಾನದಿಂದ ಬಡಾಗುಡ್ಡೆ ಕ್ಷೇತ್ರದ ತನಕ ವೈಭವದ ಪುರ ಮೆರವಣಿಗೆ ನಡೆಯಿತು. ಅರ್ಚಕ ಹೆಬ್ರಿ ನಾಗರಾಜ ಜೋಯಿಸ್ ನೇತೃತ್ವದಲ್ಲಿ ವಾಸ್ತುಹೋಮ, ಗಣಹೋಮ, ಪ್ರಧಾನ ಹೋಮ, ಬ್ರಹ್ಮಕಲಶ, ಮಹಾಪೂಜೆ ನಡೆಯಿತು.
ಗುರುವಾರ ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಶಾಸಕ ಸುನಿಲ್ ಕುಮಾರ್ ಮಾತನಾಡಿ, ‘ಸುಂದರವಾದ ಶಿಲಾಮಯ ದೈವಸ್ಥಾನ ಎಲ್ಲರ ಸಹಕಾರದಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ಸರ್ಕಾರದ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, ‘ಕೊರಗ ಸಮುದಾಯದವರಿ ಹಿಂಜರಿಕೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ವಿದ್ಯಾವಂತರಾಗಬೇಕು’ ಎಂದರು.
ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಕೋಟ್ಯಾನ್, ಸದಸ್ಯ ಎಚ್.ಬಿ.ಸುರೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಗೌರವ ಅಧ್ಯಕ್ಷ ಹೆಬ್ರಿ ನಾಗರಾಜ ಜೋಯಿಸ್, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ದನ್, ಕೋಶಾಧಿಕಾರಿ ಶಿವಪ್ರಸಾದ ಕೋಟ್ಯಾನ್, ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ದನ ಬಡಾಗುಡ್ಡೆ, ಕೋಶಾಧಿಕಾರಿ ಶುಕ್ರ, ಕಾರ್ಯದರ್ಶಿ ದೀಪಾ ಎಚ್.ಬಿ ಮುಂತಾದವರು ಭಾಗವಹಿಸಿದ್ದರು. ದೀಪಾ ನಿರೂಪಿಸಿದರು. ಎಚ್.ಜನಾರ್ದನ್ ಸ್ವಾಗತಿಸಿದರು. ಕಿರಣ್ ವಂದಿಸಿದರು. ಆನಂದ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.