ಉಡುಪಿ: ಕೊರಗ ಸಮುದಾಯದವರಿಗೆ ಉದ್ಯೋಗ ದೊರಕಿಸಿಕೊಡಲು ಪ್ರಯತ್ನ ನಡೆಸುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರ ಭರವಸೆ ನೀಡಿದ ಕಾರಣ ಕಳೆದ ಹತ್ತು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಅಂತ್ಯಗೊಂಡಿತು.
ಸರ್ಕಾರಿ ಉದ್ಯೋಗ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳದ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಖಾದರ್ ಅವರು, ಕೊರಗ ಸಮುದಾಯದವರಿಗೆ ನೇರ ನೇಮಕಾತಿ ಮೂಲಕ ಉದ್ಯೋಗ ನೀಡಲು ಕಾನೂನು ತಿದ್ದುಪಡಿ ಮಾಡಬೇಕಾಗುತ್ತದೆ. ಆದ್ದರಿಂದ ಹೊರಗುತ್ತಿಗೆ ಕೆಲಸ ಎಲ್ಲೆಲ್ಲಿ ಖಾಲಿ ಇದೆ ಎಂಬುದನ್ನು ನೋಡಿಕೊಂಡು, ಅವರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕೊರಗ ಸಮುದಾಯದವರ ಬೇಡಿಕೆಗಳ ಈಡೇರಿಕೆ ವಿಚಾರವಾಗಿ ಆಗಸ್ಟ್ 15ರ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಚರ್ಚೆ ನಡೆಸಲಾಗುವುದು. ಈ ಚರ್ಚೆಗೆ ಒಕ್ಕೂಟದ ಪದಾಧಿಕಾರಿಗಳನ್ನೂ ಕರೆದೊಯ್ಯಲಾಗುವುದು ಎಂದು ಆಶ್ವಾಸನೆ ನೀಡಿದರು.
ಕೊರಗ ಸಮುದಾಯದವರ ಯಾವ ಬೇಡಿಕೆಗಳನ್ನು ಬಗೆಹರಿಸಬಹುದು, ಯಾವುದು ಸಾಧ್ಯವಿಲ್ಲ ಎಂಬುದರ ಬಗ್ಗೆಯೂ ಸ್ಪಷ್ಟವಾದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಸುವಾಗ ಕೊರಗ ಸಮುದಾಯದವರನ್ನು ಆದ್ಯತೆಯ ಮೇರೆಗೆ ಪರಿಗಣಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುತ್ತೇನೆ. ಅಹೋರಾತ್ರಿ ಧರಣಿಯನ್ನು ಕೈಬಿಡಿ ಎಂದರು.
ಈ ಸಮುದಾಯದಲ್ಲಿ ಎಷ್ಟು ಮಂದಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾರೆ, ಎಷ್ಟು ಮಂದಿ ಪದವಿ ಪೂರ್ಣಗೊಳಿಸಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಲು ಖಾದರ್ ಅವರು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರಿಗೆ ಸೂಚಿಸಿದರು.
ನಿಮ್ಮ ಬೇಡಿಕೆಗಳ ಕುರಿತು ಒಂದೇ ಸಲಕ್ಕೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ನಿಮ್ಮ ಮುಂದಿನ ಜನಾಂಗಕ್ಕೂ ಪ್ರಯೋಜನವಾಗುವ ರೀತಿಯಲ್ಲಿ ಸರ್ಕಾರವು ರೂಪುರೇಷೆ ಸಿದ್ಧಪಡಿಸಬೇಕಾಗುತ್ತದೆ ಎಂದರು.
ನಾನು ಹಿಂದೆ ಆರೋಗ್ಯ ಸಚಿವನಾಗಿದ್ದಾಗಲೂ ಕೊರಗ ಸಮುದಾಯದವರಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಕೊರಗ ಸಮುದಾಯದ ಯುವಕನೊಬ್ಬನನ್ನು ಆರೋಗ್ಯ ಇಲಾಖೆಗೆ ನೇಮಕ ಮಾಡಿಸಿದ್ದೆ. ಆತ ಇಂದು ಇಲಾಖೆಯಲ್ಲಿಯೇ ಅತ್ಯುತ್ತಮ ಅಧಿಕಾರಿ ಎನಿಸಿದ್ದಾನೆ ಎಂದು ಹೇಳಿದರು.
ಸಾಂವಿಧಾನಿಕ ಪೀಠದಲ್ಲಿರುವ ಸ್ಫೀಕರ್ ಅವರು ಭರವಸೆ ನೀಡಿರುವ ಕಾರಣ ಅವರ ಮಾತಿಗೆ ಬೆಲೆಕೊಟ್ಟು ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ.– ಸುಶೀಲಾ ನಾಡ, ಅಧ್ಯಕ್ಷೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ
ನಿಮ್ಮಂತಹ ಸಣ್ಣ ಸಮುದಾಯದವರು ಹೀಗೆ ಪ್ರತಿಭಟನೆ ಮಾಡುತ್ತಿರುವುದು ಬೇಸರ ತರಿಸಿದೆ. ಕರಾವಳಿ ಪ್ರದೇಶದ ಮೂಲ ಸಂಸ್ಕೃತಿಯವರಾದ ಕೊರಗ ಸಮುದಾಯದವರ ಜೊತೆಗೆ ನಾವೆಲ್ಲಾ ಇದ್ದೇವೆ ಎಂದು ಖಾದರ್ ತಿಳಿಸಿದರು.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮತ್ತು ಸಂಯೋಜಕ ಕೆ.ಪುತ್ರನ್ ಅವರು ತಮ್ಮ ಸಮುದಾಯದವರು ಎದುರಿಸುವ ಸಮಸ್ಯೆಗಳನ್ನು ಸ್ಪೀಕರ್ ಮುಂದೆ ತೆರೆದಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.