ADVERTISEMENT

ಕೊರಗರಿಗೆ ಮನೆ: ಶ್ರೇಷ್ಠ ಕಾರ್ಯ

ಉಳ್ಳೂರು-74ರಲ್ಲಿ ಕೊರಗರಿಗಾಗಿ ನಿರ್ಮಿಸಿದ 14 ಮನೆಗಳನ್ನು ಲೋಕಾರ್ಪಣೆಗೊಳಿಸಿದ ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:59 IST
Last Updated 26 ಡಿಸೆಂಬರ್ 2025, 6:59 IST
ಕುಂದಾಪುರ ತಾಲ್ಲೂಕಿನ ಉಳ್ಳೂರು-74ರಲ್ಲಿ ನಿರ್ಮಿಸಿರುವ ಮನೆಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಪೇಜಾವರ ಶ್ರೀ ಉದ್ಘಾಟಿಸಿದರು
ಕುಂದಾಪುರ ತಾಲ್ಲೂಕಿನ ಉಳ್ಳೂರು-74ರಲ್ಲಿ ನಿರ್ಮಿಸಿರುವ ಮನೆಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಪೇಜಾವರ ಶ್ರೀ ಉದ್ಘಾಟಿಸಿದರು   

ಕುಂದಾಪುರ: ತೀರಾ ಹಿಂದುಳಿದ ಕೊರಗ ಸಮುದಾಯದವರಿಗೆ ವಾಸ್ತವ್ಯಕ್ಕೆ ಮನೆ ನಿರ್ಮಿಸಿ ಕೊಡುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ₹2.5 ಕೋಟಿ ವೆಚ್ಚದಲ್ಲಿ ಉಳ್ಳೂರು-74 ಗ್ರಾಮದಲ್ಲಿ ಕೊರಗ ಸಮುದಾಯದವರಿಗೆ ನಿರ್ಮಿಸಲಾದ 14 ಮನೆಗಳನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

‘ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದ್ದು, ರಾಮರಾಜ್ಯದ ಕಲ್ಪನೆ ಸಾಕಾರವಾಗಬೇಕು. ಕೊರಗ ಸಮುದಾಯದವರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಎಚ್.ಎಸ್.ಶೆಟ್ಟಿ ಅವರ ಸೇವೆಯನ್ನು ಅಯೋಧ್ಯೆಯ ಶ್ರೀರಾಮನ ಪದತಲಕ್ಕೆ ಅರ್ಪಿಸುತ್ತೇನೆ’ ಎಂದರು.

ADVERTISEMENT

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಮಾತನಾಡಿ, ಸರ್ಕಾರ ಮತ್ತು ಸಂಘಟನೆಗಳು ಮಾಡಬೇಕಾದ ಮಾನವೀಯ ಮೌಲ್ಯದ ಕೆಲಸವನ್ನು ಎಚ್.ಎಸ್. ಶೆಟ್ಟಿ ಮಾಡಿದ್ದಾರೆ. ಸಮಾಜ ಸೇವೆ ಮಾಡುವವರು ಯಾವುದೇ ಅಪೇಕ್ಷೆ ಇಲ್ಲದೆ ಸೇವಾ ಕಾರ್ಯ ಮಾಡುತ್ತಲೇ ಇರುತ್ತಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಮನೆ ನಿರ್ಮಿಸಿ ಕೊಡುವ ಕನಸನ್ನು ಕಂಡಿದ್ದ ಶೆಟ್ಟರು, ಒಳ್ಳೆಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೊರಗರಿಗಾಗಿ ನೇರ ನೇಮಕಾತಿ ಮತ್ತು ಆರೋಗ್ಯ ಕುರಿತು ಸಂಶೋಧನೆ ಮಾಡುವ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನೊಂದವರು ಕೊರಗರು. ಕೊರಗ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವ ದೃಷ್ಟಿಯಲ್ಲಿ ನಮ್ಮ ಟ್ರಸ್ಟ್ ವತಿಯಿಂದ 100 ಮನೆ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇವೆ. ಕೊರಗರ ಮನೆ ನಿರ್ಮಾಣ ಕಾರ್ಯಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರೇರಣೆ ಎಂದರು.

ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಎ.ಕಿರಣ್‍ಕುಮಾರ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಯಶಪಾಲ್ ಸುವರ್ಣ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ-ಕೇರಳ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷೆ ಸುಶೀಲಾ ನಾಡ, ಉಳ್ಳೂರು-74 ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಶೆಟ್ಟಿ, ಉಳ್ಳೂರು-74 ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ, ರಾಜೀವ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಹಾಲಾಡಿ ಇದ್ದರು.

ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಸ್ವಾಗತಿಸಿದರು. ಕಾರವಾರ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾನತೆ ಸಾರಿದ ಕಾಯಕ’

ಆಶಯ ಭಾಷಣ ಮಾಡಿದ ಚಿತ್ರದುರ್ಗಾ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಬಸವಣ್ಣನವರ ಪರಿಕಲ್ಪನೆಯಂತೆ ಎಚ್.ಎಸ್ ಶೆಟ್ಟಿ ಅವರು ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಕೊರಗರು ಸ್ವಾಭಿಮಾನದಿಂದ ಬದುಕಬೇಕು ಎನ್ನುವ ನೆಲೆಯಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸಮಾಜಮುಖಿ ಕಾರ್ಯದ ಮೂಲಕ ಸಮಾನತೆ ಸಾರಿದ್ದಾರೆ ಎಂದರು.