ಉಡುಪಿ: ಸೇವೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅಂಬಾಗಿಲು ಕಕ್ಕುಂಜೆ ಸಮೀಪದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ದೀನದಲಿತರ, ಹಿಂದುಳಿದವರ ನೋವುಗಳಿಗೆ ಸ್ಪಂದಿಸಿ ಅವರ ಕೆಲಸವನ್ನು ಮಾಡಿಕೊಟ್ಟಾಗ ಅದಕ್ಕಿಂದ ದೊಡ್ಡ ಬಹುಮಾನ ಇನ್ನೊಂದಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಮಾಜದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಲಭಿಸುತ್ತದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಮಾತನಾಡಿ, ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯದ ಸೇವೆಯನ್ನು ನೀಡುವ ಮೂಲಕ ಸ್ವಾಸ್ಥ್ಯಯುತ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿರುವ ಕ್ರೈಸ್ತ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಇದೇ ವೇಳೆ ನೂತನವಾಗಿ ಚುನಾಯಿತರಾದ ಜನಪ್ರತಿನಿಧಿಗಳು, ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರನ್ನು ಸನ್ಮಾನಿಸಲಾಯಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಇದರ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್ ಅಭಿನಂದನಾ ನುಡಿಗಳನ್ನಾಡಿದರು.
ಕಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷೆ ಮೇರಿ ಡಿಸೋಜ, ಪ್ರಧಾನ ಕಾರ್ಯದರ್ಶಿ ಒಲಿವಿಯಾ ಜೆ.ಡಿಮೆಲ್ಲೊ ಇದ್ದರು. ಎಲ್ರೋಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಎಡ್ವರ್ಡ್ ಲಾರ್ಸನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.