ADVERTISEMENT

ಸಹಕಾರಿ ಬ್ಯಾಂಕ್‌ನಿಂದ ರೈತರಿಗೆ ಶಕ್ತಿ

ಕೋಟ ಸಿ.ಎ ಬ್ಯಾಂಕ್‌ ನೂತನ ಸಭಾಭವನ, ಗೋದಾಮು, ಸೇವಾ ಕೇಂದ್ರ ಉದ್ಘಾಟಿಸಿದ ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 6:40 IST
Last Updated 12 ಡಿಸೆಂಬರ್ 2022, 6:40 IST
ಕೋಟ ಸಹಕಾರಿ ವ್ಯವಸಾಯಿಕ ಸಂಘದ ನೂತನ ಸಭಾಭವನ, ಗೋದಾಮು ಮತ್ತು ಸೇವಾ ಕೇಂದ್ರವನ್ನು ಭಾನುವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು
ಕೋಟ ಸಹಕಾರಿ ವ್ಯವಸಾಯಿಕ ಸಂಘದ ನೂತನ ಸಭಾಭವನ, ಗೋದಾಮು ಮತ್ತು ಸೇವಾ ಕೇಂದ್ರವನ್ನು ಭಾನುವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು   

ಕೋಟ (ಬ್ರಹ್ಮಾವರ): ಗ್ರಾಮೀಣ ಭಾಗದ ಜನರ ವಿಶ್ವಾಸ ಗಳಿಸಿ ರೈತರ ಬದುಕಿಗೆ ಶಕ್ತಿ ತುಂಬುವ ಕೆಲಸ ಸಹಕಾರಿ ಬ್ಯಾಂಕ್‌ಗಳಿಂದ ಆಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ‍ಪಟ್ಟರು.

ಕೋಟ ಸಹಕಾರಿ ವ್ಯವಸಾಯಿಕ ಸಂಘದ ನೂತನ ಸಭಾಭವನ, ಗೋದಾಮು ಮತ್ತು ಸೇವಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋಟ ಸಹಕಾರಿ ಬ್ಯಾಂಕ್‌ ಜನೌಷಧಿ ಕೇಂದ್ರವನ್ನು ತೆರೆದು ಗ್ರಾಮೀಣ ಜನತೆಗೆ ಸೇವೆಯನ್ನು ನೀಡುತ್ತಿರುವುದು ರಾಜ್ಯದಲ್ಲಿಯೇ ಮೊದಲು. ಇದು ಇತರೆ ಸಹಕಾರಿ ಕ್ಷೇತ್ರಕ್ಕೆ ಮಾದರಿ. ಭಾರತದಲ್ಲಿ ರೈತರನ್ನು ಸರ್ಕಾರ ಮತ್ತು ಸಹಕಾರಿ ಕ್ಷೇತ್ರಗಳು ಹುರಿದುಂಬಿಸುತ್ತಿದೆ ಎಂದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಬ್ಯಾಂಕ್‌ ನಿರ್ದೇಶಕ ಡಾ.ಐಕಳ ದೇವಿಪ್ರಸಾದ ಶೆಟ್ಟಿ ನೂತನ ಕಟ್ಟಡವನ್ನು ಉದ್ಘಾಟಿಸಿ ಕರಾವಳಿಯ ಸಹಕಾರಿ ಜನರ ಆರ್ಥಿಕ ಶಕ್ತಿಯಾಗಿ ದುರ್ಬಲರ ಆಶಾಕಿರಣವಾಗಿದೆ. ಗ್ರಾಮೀಣ ಜನರಿಗೆ ಪಂಚಾಯಿತಿ ನೀಡುವ ಸೌಲಭ್ಯಗಳನ್ನು ಸಹಕಾರಿ ಬ್ಯಾಂಕ್‌ಗಳು ನೀಡಿ ಗ್ರಾಹಕರನ್ನು ತನ್ನತ್ತ ಹೆಚ್ಚು ಸೆಳೆದುಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಡಿತರ ಗೋದಾಮು, ಸೇವಾ ಕೇಂದ್ರ, ಬಿ.ಸಿ ಹೊಳ್ಳ ಸಹಕಾರ ಸಭಾಭವನ, ಸಕಲ ಮಾರಾಟ ಮಳಿಗೆ, ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದ‌ರ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಉಡುಪಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ ಉಪಾಧ್ಯಕ್ಷ ಶಿವರಾಮ ಉಡುಪ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್‌ ದೇವಾಡಿಗ, ಪ್ರಮುಖರಾದ ಶೋಭಾ ಶೆಟ್ಟಿ, ಕೊರಗ ಪೂಜಾರಿ, ಭೋಜ ಹೆಗ್ಡೆ, ರಮೇಶ್‌ ಶೆಟ್ಟಿ ಉಪ್ಪೂರು, ರತ್ನಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷ ರಾಜೀವ ದೇವಾಡಿಗ, ನಿರ್ದೇಶಕರು, ಸಿಬ್ಬಂದಿ ಇದ್ದರು.

ಸನ್ಮಾನ, ಗೌರವ: ಸಹಕಾರಿ ಧುರೀಣರಾದ ಡಾ.ಐ.ದೇವಿಪ್ರಸಾದ್‌ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ. ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಾಧಕ
ರಾದ ಶ್ರೀಧರ ಸೋಮಯಾಜಿ, ಜಾನಕಿ ಹಂದೆ, ರಾಘವೇಂದ್ರ ಶೆಟ್ಟಿ, ಎಂಜಿನಿಯರ್‌ ಚೇತನ್‌, ಗುತ್ತಿಗೆದಾರ ಸಂತೋಷ್‌ ಮತ್ತು ಪವರ್‌ ಲಿಫ್ಟರ್‌ ವಿಜೇತ ಕಾರ್ತಿಕ್‌ ಅವರನ್ನು ಗೌರವಿಸಲಾಯಿತು.

ಸಂಘದ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್‌ ಕುಮಾರ್‌ ಶೆಟ್ಟಿ ವರದಿ ವಾಚಿಸಿದರು. ಅಧ್ಯಾಪಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಡಗುತಿಟ್ಟಿನ ಕಲಾವಿದರಿಂದ ಭೀಷ್ಮ ವಿಜಯ ಯಕ್ಷಗಾನ ಮತ್ತು ಸಂಘದ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.