ಕುಂದಾಪುರ: ಕೋಟೇಶ್ವರದ ಹಾಲಾಡಿ ರಸ್ತೆಯ ಕಾಳಾವರ ವರದರಾಜ್ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಮಂಗಳವಾರ ತರಗತಿ ಮುಗಿಸಿ ಸ್ನೇಹಿತರೊಂದಿಗೆ ರಸ್ತೆಬದಿಯ ಇಂಟರ್‌ಲಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಂದೂರು ತಾಲ್ಲೂಕಿನ ನಾಗೂರು ಕೋಯಾ ನಗರ ನಿವಾಸಿ, ಪ್ರಥಮ ಬಿ.ಎಸ್‌ಸಿ ವಿದ್ಯಾರ್ಥಿ ಧನುಷ್ ಯು. ಅಮೀನ್ (19) ಮೃತಪಟ್ಟವರು. ತರಗತಿ ಮುಗಿಸಿ ತನ್ನ ಇಬ್ಬರು ಸ್ನೇಹಿತರೊಂದಿಗೆ ತೆರಳುತ್ತಿದ್ದ ಅವರಿಗೆ ಹಿಂದಿನಿಂದ ವೇಗವಾಗಿ ಬಂದ ಶ್ರೀಮಹಾಗಣಪತಿ ಪ್ರಸನ್ನ ಹೆಸರಿನ ಟಿಪ್ಪರ್ ಡಿಕ್ಕಿ ಹೊಡೆದಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋಗಿ ಧನುಷ್ ಅವರ ಹಿಂಭಾಗಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯಡಿಗೆ ಬಿದ್ದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಯಿಯೊಂದಿಗೆ ನಾಗೂರಿನಲ್ಲಿ ವಾಸಿಸುತ್ತಿದ್ದ ಧನುಷ್ ಅವರ ತಂದೆ ಬಾರ್ಕೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರ್‌ವೊಂದರ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.