ADVERTISEMENT

ಕೋವಿಡ್ ಭೀತಿ: ಸಭೆ ಸಮಾರಂಭಗಳು ರದ್ದು

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 13:59 IST
Last Updated 13 ಮಾರ್ಚ್ 2020, 13:59 IST

ಉಡುಪಿ: ಕೋವಿಡ್‌–19 ಹರಡುವಿಕೆ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಾದ್ಯಂತ ಸಭೆ, ಸಮಾರಂಭ, ಸಮ್ಮೇಳನಗಳ ಆಯೋಜನೆಗೆ ಸರ್ಕಾರ ನಿರ್ಬಂಧ ಹೇರಿದ್ದು, ಜಿಲ್ಲೆಯಲ್ಲೂ ನಿಗಧಿಯಾಗಿದ್ದ ಕಾರ್ಯಕ್ರಮಗಳು ರದ್ದಾಗಿವೆ.

ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಬ್ರಹ್ಮಾವರದ ಹಂಗಾರಕಟ್ಟೆಯ ಚೇತನ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಸಮ್ಮೇಳನದ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ತಿಳಿಸಿದ್ದಾರೆ.

ADVERTISEMENT

ಮಕ್ಕಳೋತ್ಸವ ಮುಂದೂಡಿಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾರ್ಚ್ 19ರಂದು ಬೈಲೂರಿನ ಆಶಾ ನಿಲಯದಲ್ಲಿ ಹಮ್ಮಿಕೊಂಡಿದ್ದ ‘ವಿಶೇಷ ಮಕ್ಕಳಿಗೆ ಒಂದು ದಿನದ ಮಕ್ಕಳೋತ್ಸವ’ವನ್ನು ರದ್ದುಮಾಡಲಾಗಿದೆ.ಮುಂದಿನ ಕಾರ್ಯಕ್ರಮದ ದಿನವನ್ನು ತಿಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ

ಜಿಲ್ಲೆಯ 1ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ಮಾಚ್೯ 14ರಿಂದ ರಜೆ ಘೋಷಿಸಲಾಗಿದೆ.7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾಚ್೯ 23ರೊಳಗೆ ಪರೀಕ್ಷೆ ಮುಗಿಸಿ ರಜೆ ನೀಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗಧಿಯಂತೆ

ಈಗಾಗಲೇ ನಿಗದಿಯಾಗಿರುವಂತೆ ಮಾಚ್೯ 27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಪ್ರಥಮ ಪಿಯುಸಿ ಪರೀಕ್ಷೆ ಫೆಬ್ರುವರಿಯಲ್ಲಿ ಮುಕ್ತಾಯಗೊಂಡಿದ್ದು ರಜೆ ನೀಡಲಾಗಿದೆ. ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ನಿಗಧಿಯಂತೆ ನಡೆಯಲಿವೆ. ಪದವಿ, ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಮಾರ್ಚ್‌ 28ರವರೆಗೆ ರಜೆ ನೀಡಲಾಗಿದೆ ಎಂದುಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ಬಾಂಧವ್ಯ ಕಾರ್ಯಕ್ರಮ ಮುಂದೂಡಿಕೆ

ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘದಿಂದ ಮಾರ್ಚ್‌ 14ರಂದು ಬ್ರಹ್ಮಾವರದ ಬಂಟರ ಭವನದಲ್ಲಿ ಏರ್ಪಡಿಸಿದ್ದ ಬಾಂಧವ್ಯ–2020 ಕಾರ್ಯಕ್ರಮವನ್ನು ಮೂಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಎಸ್.ಗಾಣಿಗತಿಳಿಸಿದ್ದಾರೆ.

ಮಾರ್ಚ್‌ 15ರಂದುವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆಯಬೇಕಿದ್ದ ‘ವಿಶ್ವಗ್ರಾಹಕ ದಿನಾಚರಣೆ’ಯನ್ನು ರದ್ದು ಮಾಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಉಡುಪಿ ಬಳಕೆದಾರರ ವೇದಿಕೆ ತಿಳಿಸಿದೆ.

ತಾತ್ಕಾಲಿಕ ನಿರ್ಬಂಧ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಘಟಕಗಳಾದ ಮಂಗಳೂರು ಡೇರಿ, ಉಡುಪಿ ಡೇರಿ, ಮಣಿಪಾಲ ಶೀತಲೀಕರಣ ಕೇಂದ್ರ ಹಾಗೂ ಪುತ್ತೂರು ಶೀತಲೀಕರಣ ಕೇಂದ್ರಗಳಿಗೆ ಸಂದರ್ಶನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಡೇರಿ ಘಟಕಗಳ ವೀಕ್ಷಣೆಗೆ ಸದ್ಯ ಭೇಟಿ ನೀಡುವುದು ಬೇಡ ಎಂದು ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.