ADVERTISEMENT

ಸೆ.10ರಂದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ

ಸೌರಮಾನ ಪದ್ಧತಿ ಪಾಲನೆ: ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ಪೋಷಕರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 14:32 IST
Last Updated 11 ಆಗಸ್ಟ್ 2020, 14:32 IST
ಕೃಷ್ಣ ಮಠದಲ್ಲಿ ಮಂಗಳವಾರ ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಕೃಷ್ಣ ದೇವರಿಗೆ ‘ಗೋಪಾಲಕೃಷ್ಣ’ ಅಲಂಕಾರ ಮಾಡಿದ್ದರು. ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
ಕೃಷ್ಣ ಮಠದಲ್ಲಿ ಮಂಗಳವಾರ ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಕೃಷ್ಣ ದೇವರಿಗೆ ‘ಗೋಪಾಲಕೃಷ್ಣ’ ಅಲಂಕಾರ ಮಾಡಿದ್ದರು. ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.   

ಉಡುಪಿ: ಕೃಷ್ಣ ಜನ್ಮಾಷ್ಟಮಿ ದಿನವಾದ ಮಂಗಳವಾರ ಕೃಷ್ಣಮಠದಲ್ಲಿ ವಿಶೇಷ ಪೂಜೆ ನಡೆಯಿತು. ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಶ್ರೀಗಳು ಕೃಷ್ಣ ದೇವರಿಗೆ ‘ಗೋಪಾಲಕೃಷ್ಣ’ ಅಲಂಕಾರ ಮಾಡಿದರು. ಪರ್ಯಾಯ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ದೇವರಿಗೆ ಮಹಾಪೂಜೆ ನೆರವೇರಿಸಿದರು.

ಸೆ.10ರಂದು ಕೃಷ್ಣಜನ್ಮಾಷ್ಠಮಿ:ಹಿಂದಿನಿಂದಲೂ ಕೃಷ್ಣಮಠದಲ್ಲಿ ಸೌರಮಾನ ಕ್ರಮದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಸೆ.10ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎರಡೂ ಕ್ರಮಗಳಲ್ಲಿ ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿ ನಡೆಯುತ್ತದೆ. ಉಡುಪಿಯಲ್ಲಿ ಮಾತ್ರ ಸೌರಮಾನ ಪದ್ಧತಿಯನ್ನೇ ಅನುಸರಿಸಿಕೊಂಡು ಬರುತ್ತಿರುವ ಕಾರಣ, ಸೆ.10ರಂದು ಹಬ್ಬ ಆಚರಿಸಲಾಗುವುದು ಎನ್ನುತ್ತಾರೆ ಮಠದ ಸಿಬ್ಬಂದಿ.

ADVERTISEMENT

ಕೃಷ್ಣಮಠದಲ್ಲಿ ಅಷ್ಟಮಿ ಆಚರಣೆ ಇಲ್ಲವಾದರೂ ಪೋಷಕರು ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷ ತೊಡಿಸಿ ಸಂಭ್ರಮಿಸಿದರು. ಈ ಬಾರಿ ಕೊರೊನಾ ಕಾರಣದಿಂದ ಸಾರ್ವಜನಿಕವಾಗಿ ಮುದ್ದುಕೃಷ್ಣ ಸ್ಪರ್ಧೆಗಳ ಆಯೋಜನೆಗೆ ನಿರ್ಬಂಧವಿದ್ದರೂ, ಕೆಲವು ಸಂಘ–ಸಂಸ್ಥೆಗಳು ಆನ್‌ಲೈನ್‌ನಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದವು.

ಮನೆಯಲ್ಲಿಯೇ ಮಕ್ಕಳಿಗೆ ಕೃಷ್ಣ–ರಾಧೆಯ ಅಲಂಕಾರ ಮಾಡಿ, ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪೋಷಕರು ಖುಷಿಪಟ್ಟರು. ಕೃಷ್ಣಮಠದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದರೂ ಭಕ್ತರು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು.

ಅಷ್ಟಮಿಗೆ ಕೊರೊನಾ ಅಡ್ಡಿ:ಕೃಷ್ಣ ಜನ್ಮಾಷ್ಟಮಿ ಉಡುಪಿಯ ಬಹುದೊಡ್ಡ ಸಂಭ್ರಮಗಳಲ್ಲೊಂದು. ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಅಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಗಳು ಈ ವರ್ಷ ಕೊರೊನಾದಿಂದ ಕಳೆಗುಂದುವ ಸಾಧ್ಯತೆಗಳಿವೆ. ದೇಶ ವಿದೇಶಗಳಿಂದ ಕೃಷ್ಣನ ಲೀಲೋತ್ಸವ ಕಂಣ್ತುಬಿಕೊಳ್ಳಲು ಬರುತ್ತಿದ್ದವರ ಸಂಖ್ಯೆಯೂ ಕುಸಿಯಲಿದೆ. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಗಳು ಸರಳವಾಗಿ ನಡೆಯುವ ಸಾಧ್ಯತೆಗಳಿವೆ.

ಅದಮಾರು ಶ್ರೀ ಸಂದೇಶ:ಕೃಷ್ಣ ಬಲ ಉಳ್ಳವ, ಆನಂದ ಉಳ್ಳವ, ಕೃಷಿ ಇಲ್ಲದೆ ಸುಲಭವಾಗಿ ದಕ್ಕದವ. ಕೃಷ್ಣನನ್ನು ಪಡೆಯಲು ನಿರಂತರ ಸಾತ್ವಿಕ ಚಿಂತನೆ ಮಾಡುವುದು ಅಗತ್ಯ. ಕೃಷ್ಣ ಆಶ್ರಯದಾತ ಕೂಡ. ಕಂಸನನ್ನು ಸಂಹರಿಸಿದ ಕೃಷ್ಣನಿಗೆ ಜರಾಸಂಧನನ್ನು ಕೊಲ್ಲುವುದು ಕಷ್ಟವಾಗಿರಲಿಲ್ಲ. ಆದರೆ, ಭೀಮನಿಂದಲೇ ಜರಾಸಂಧನ ಹತನಾಗಬೇಕು ಎಂಬುದು ಕೃಷ್ಣನ ತೀರ್ಮಾನವಾಗಿತ್ತು. ಈ ಕಾರಣಕ್ಕೆ ಕ್ಷತ್ರಿಯನಾದರೂ ಯುದ್ಧಬಿಟ್ಟು ಓಡಿ ಹೋಗಿದ್ದ ಕೃಷ್ಣನ ನಡೆಗಳು ಸದಾ ಭಿನ್ನ. ಪ್ರಜೆಗಳಿಗೆ ತೊಂದರೆಯಾದಾಗ ರಾಜ ಪಾಲಿಸಬೇಕಾದ ಕರ್ತವ್ಯ ಹಾಗೂ ತ್ಯಾಗವನ್ನು ತೋರಿಸಿದ್ದಾನೆ. ಕೃಷ್ಣ ಎಂದರೆ ಅನಾದಿ, ಅನಂತ. ಕೃಷ್ಣನನ್ನು ಸರಿಯಾಗಿ ತಿಳಿದರೆ ಸಾಕ್ಷಾತ್ಕಾರವಾಗುತ್ತದೆ ಎಂದು ಅದಮಾರು ಮಠದಈಶಪ್ರಿಯ ತೀರ್ಥ ಸ್ವಾಮೀಜಿ ಸಂದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.