ADVERTISEMENT

ಕೃಷ್ಣನ ಸಂದೇಶ ವಿಶ್ವ ಮಾನ್ಯ

ಕೃಷ್ಣ ಜಯಂತಿಯಲ್ಲಿ ಶಾಸಕ ರಘುಪತಿ ಭಟ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:20 IST
Last Updated 19 ಆಗಸ್ಟ್ 2022, 15:20 IST
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ಕೃಷ್ಣ ಜಯಂತಿಯನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ಕೃಷ್ಣ ಜಯಂತಿಯನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.   

ಉಡುಪಿ: ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ವಿಶ್ವಕ್ಕೆ ಸಲ್ಲುತ್ತವೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಮತ್ತು ಪರ್ಯಾಯ ಕೃಷ್ಣಾಪುರ ಮಠದ ಸಹಕಾರದಲ್ಲಿ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷ್ಣ ಭೋದಿಸಿದ ಭಗವದ್ಗೀತೆಯಲ್ಲಿ ಜೀವನ ವಿಧಾನ, ಆಡಳಿತ ವ್ಯವಸ್ಥೆ ಅಡಗಿದೆ. ಕೃಷ್ಣನ ಸಂದೇಶಗಳ ಸಾರ ವಿಶ್ವದ ಎಲ್ಲರಿಗೂ ಅನ್ವಯವಾಗಲಿದ್ದು, ವಿದೇಶಿಯರೂ ಕೃಷ್ಣನ ತತ್ವ ಸಂದೇಶಗಳ ಆಕರ್ಷಣೆಗೆ ಒಳಗಾಗಿದ್ದಾರೆ. ಕೃಷ್ಣನನ್ನು ಹೆಚ್ಚು ಅರಿಯಲು ಭಾರತಕ್ಕೆ ಬರುತ್ತಿದ್ದಾರೆ ಎಂದರು.

ADVERTISEMENT

ಜಗತ್ತಿನ ಹಲವು ಮಹಾನ್ ವ್ಯಕ್ತಿಗಳ ಉನ್ನತ ಸಾಧನೆಗೆ ಭಗವದ್ಗೀತೆಯಲ್ಲಿನ ಸಂದೇಶಗಳು ಕಾರಣವಾಗಿವೆ. ಉಡುಪಿಯಲ್ಲಿ 800 ವರ್ಷಗಳ ಹಿಂದೆ ಮಧ್ವಾಚಾರ್ಯರು ಕೃಷ್ಣನನ್ನು ಪ್ರತಿಷ್ಠಾಪಿಸಿ ಮಾಧ್ವ ತತ್ವಗಳನ್ನು ಜಗತ್ತಿಗೆ ಸಾರಿದ್ದಾರೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಅಕ್ಷಯಾ ಗೋಖಲೆ ‘ಧರ್ಮದ ರಕ್ಷಣೆಗಾಗಿ ಅಧರ್ಮದ ವಿರುದ್ದ ಹೋರಾಡಲು ಅವತರಿಸಿದ ಕೃಷ್ಣ ಭಗವದ್ಗೀತೆಯಲ್ಲಿ ತಿಳಿಸಿರುವ ವಿಚಾರಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಜ್ಞಾನ ದೊರೆಯುತ್ತದೆ ಎಂದರು.

ಪ್ರಯತ್ನ ಪಟ್ಟರೆ ಉತ್ತಮ ಫಲ ದೊರೆಯುತ್ತದೆ ಎಂಬ ಕೃಷ್ಣನ ಸಂದೇಶ ವಿದ್ಯಾರ್ಥಿಗಳು ಹಾಗೂ ಯುವಜನಾಂಗಕ್ಕೆ ಸಾಧನೆಗೆ ಸ್ಫೂರ್ತಿ. ಪ್ರತಿಯೊಬ್ಬರೂ ಎಂತಹ ಪರಿಸ್ಥಿತಿಯಲ್ಲಿ ನನ್ನಿಂದ ಕಾರ್ಯ ಅಸಾಧ್ಯ ಎಂದು ಹತಾಶನಾಗದೆ ಮುನ್ನೆಡೆದರೆ ಯಶಸ್ಸು ದೊರೆಯುತ್ತದೆ ಎಂಬ ಸಂದೇಶವೂ ಗೀತೆಯಲ್ಲಿದೆ. ಕೃಷ್ಣನ ಸಂದೇಶಗಳಿಂದ ಬದುಕಿನಲ್ಲಿ ಸ್ಪೂರ್ತಿ, ಪ್ರೇರಣೆ ದೊರೆಯಲಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ.ಆರ್.ಮೆಂಡನ್, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರಿಸ್‌ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ, ಎಸ್‌ಪಿ ಅಕ್ಷಯ್ ಮಚೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘಧ ಅಧ್ಯಕ್ಷ ದಯಾನಂದ್ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಜಯಂತಿ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳು, ನೃತ್ಯ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.