
ಕೋಟ (ಬ್ರಹ್ಮಾವರ): ಕೋಟ ಸಹಕಾರಿ ವ್ಯವಸಾಯಕ ಸಂಘದಿಂದ ಆರಂಭಗೊಂಡ ಕ್ಷೀರ ಸಂಜೀವಿನಿಯಿಂದ ಹೈನುಗಾರಿಕೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ಕೆ.ಎಂ.ಎಫ್ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದರು.
ಸಂಘದ ಪ್ರಾಂಗಣದಲ್ಲಿ ಶುಕ್ರವಾರ ಸಂಘದ ನೂತನ ಯೋಜನೆ ಕ್ಷೀರ ಸಂಜೀವಿನಿಗೆ ಚಾಲನೆ ನೀಡಿ ಅವರು ಮಾತನಾಡಿ, ಹೈನುಗಾರಿಕೆ ಕರಾವಳಿ ಭಾಗದಲ್ಲಿ ಕ್ಷೀಣಿಸುತ್ತಿದೆ. ಇಂತಹ ಸಮಯದಲ್ಲಿ ಈ ಯೋಜನೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿದರು.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಐಕಳ ದೇವಿಪ್ರಸಾದ ಶೆಟ್ಟಿ ಮಾತನಾಡಿ, ಸಹಕಾರಿ ಚರಿತ್ರೆಯಲ್ಲಿ ಕೋಟ ಸಹಕಾರಿ ಸಂಘ ಹೊಸ ಹೊಸ ಯೋಜನೆಗಳ ಮೂಲಕ ಮನೆಮಾತಾಗಿ ಬೆಳೆದು ನಿಂತಿದೆ. ಹೈನುಗಾರಿಕೆ ಇಂದು ಉದ್ಯಮ ರೀತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ. ಹಾಲಿಗೆ ಕನಿಷ್ಠ ಪಕ್ಷ ಲೀಟರ್‌ಗೆ ₹50 ಸಿಕ್ಕಿದಲ್ಲಿ ಹೈನುಗಾರಿಕೆಗೆ ಮತ್ತಷ್ಟು ಬಲ ಸಿಗಲಿದೆ ಎಂದರು.
ತಮಿಳುನಾಡಿನ ಈರೋಡ್‌ನಿಂದ ತರಲಾದ 12 ರಾಸುಗಳಿಗೆ ಗೋ ಪೂಜೆ ನೆರವೆರಿಸಲಾಯಿತು. ಆಯ್ದ ಫಲಾನುಭವಿಗಳಿಗೆ ರಾಸುಗಳ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ, ಕೆಎಂಎಫ್ ನಿರ್ದೇಶಕರಾದ ಕೆ. ಶಿವಮೂರ್ತಿ ಉಪಾಧ್ಯ, ಮಮತಾ ಶೆಟ್ಟಿ, ಉಪ ವ್ಯವಸ್ಥಾಪಕ ಡಾ.ಮಾಧವ ಐತಾಳ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ಸುಧೀರ ಕುಮಾರ್, ಬ್ರಹ್ಮಾವರ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಉದಯ ಕುಮಾರ್ ಶೆಟ್ಟಿ, ಕೋಟ ಸಹಕಾರ ವ್ಯವಸಾಯಕ ಸಂಘದ ಉಪಾಧ್ಯಕ್ಷ ಎಚ್. ನಾಗರಾಜ್ ಹಂದೆ, ನಿರ್ದೇಶಕರಾದ ತಿಮ್ಮ ಪೂಜಾರಿ, ಮಹೇಶ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ರವೀಂದ್ರ ಕಾಮತ್, ಅಜಿತ್ ದೇವಾಡಿಗ, ರಶ್ಮಿ, ವಸಂತಿ ಪೂಜಾರಿ, ರಂಜಿತ್ ಕುಮಾರ್, ಪ್ರೇಮಾ, ದಿನಕರ ಶೆಟ್ಟಿ, ಶೇಖರ ಮರಕಾಲ, ರಾಜಾರಾಂ ಶೆಟ್ಟಿ ಭಾಗವಹಿಸಿದ್ದರು. ನಿರ್ದೇಶಕ ಟಿ. ಮಂಜುನಾಥ್ ಗಿಳಿಯಾರ್ ಸ್ವಾಗತಿಸಿದರು. ಸಿಬ್ಬಂದಿ ಮಂಜುನಾಥ ನಿರೂಪಿಸಿದರು. ಸಂಘದ ಸಿಇಒ ಶರತ ಕುಮಾರ್ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.