ಕುಂದಾಪುರ: ಆ ಮಗುವಿಗಿನ್ನೂ ಎರಡು ವರ್ಷವೂ ತುಂಬಿಲ್ಲ, ಅದಾಗಲೇ ಅಂತರರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ತಂದೆ, ತಾಯಿ ಹಾಗೂ ಕುಟುಂಬದವರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಕುಂದಾಪುರ ಸಮೀಪದ ಪಡುಕೋಣೆಯ ಹನ್ವಿಕಾ ಎಸ್. ದೇವಾಡಿಗ ಪ್ರತಿಷ್ಠಿತ ಅಂತರರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ಪಡುಕೋಣೆ ಮೂಲದವರಾದ ಪ್ರಸ್ತುತ ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿರುವ ಸಚೀಂದ್ರ ಆರ್. ದೇವಾಡಿಗ ಹಾಗೂ ಗೃಹಿಣಿ ಶ್ವೇತಾ ದೇವಾಡಿಗರ ಪುತ್ರಿ ಹನ್ವಿಕಾಳಿಗೆ ಇನ್ನೂ 1 ವರ್ಷ 9 ತಿಂಗಳ ಹರಯ. ಅದಾಗಲೇ ತನ್ನೊಳಗಿನ ಸುಪ್ತ ಪ್ರತಿಭೆಯಿಂದ ಪ್ರಶಸ್ತಿ ಪಡೆದಿದ್ದಾಳೆ.
1 ವರ್ಷ 6 ತಿಂಗಳು ಇರುವಾಗಲೇ 15 ವಿಭಾಗಗಳಲ್ಲಿ ಸಾಧನೆ ಮಾಡಿ ಇಂಟರ್‌ನ್ಯಾಷನಲ್ ವರ್ಲ್ಡ್ ಎಕ್ಸಲೆನ್ಸ್- ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದುಕೊಂಡಿದ್ದು, ಇದೀಗ 1.9 ವರ್ಷವಾಗುವಾಗ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಹನ್ವಿಕಾ 7 ತಿಂಗಳು ಇರುವಾಗಲೇ ಕೆಲವೊಂದು ಮಾತುಗಳಿಗೆ ಕೈ ಬಾಯಿ ಸನ್ನೆಗಳ ಮೂಲಕ ಪ್ರತಿಕ್ರಿಯಿಸುವುದನ್ನು ಗಮನಿಸಿದ್ದ ಪೋಷಕರು, ಆಕೆಯ ಅಂತರಾಳದಲ್ಲಿ ವಿಶೇಷವಾದ ಸ್ಮರಣ ಶಕ್ತಿ ಇರುವುದನ್ನು ಗಮನಿಸಿದ್ದಾರೆ. ಮಗುವಿನ ಬೆಳವಣಿಗೆಯ ಪ್ರತಿ ಹೆಜ್ಜೆಯನ್ನು ಗಮನಿಸುತ್ತಾ ಬಂದಿದ್ದ ದಂಪತಿ, ಮಗುವಿನ ಆಸಕ್ತಿಯನ್ನು ಹೆಚ್ಚಿಸಲು ಶಕ್ತಿಮೀರಿ ಪ್ರೋತ್ಸಾಹ ನೀಡಿದ್ದಾರೆ. ಮಗುವಿನ ಆಸಕ್ತಿ, ಅದ್ಭುತವಾದ ಸ್ಮರಣ ಶಕ್ತಿ ಹಾಗೂ ಸೂಕ್ಷ್ಮ ಗ್ರಹಿಕೆಯನ್ನು ಗಮನಿಸಿದ್ದ ಅಜ್ಜ, ಅಜ್ಜಿ, ಕುಟುಂಬ ಸದಸ್ಯರು ಹಾಗೂ ಆಪ್ತ ವರ್ಗದವರು ಮಗುವಿನ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದರು.
ಯಾವುದೇ ತರಬೇತಿಯನ್ನು ಪಡೆಯದೆ, ಹೆತ್ತವರ ಪ್ರಶ್ನೆ ಹಾಗೂ ಚಟುವಟಿಕೆಗಳಿಗೆ ಥಟ್ ಅಂತ ತೊದಲು ನುಡಿಗಳಲ್ಲಿ ಹಾಗೂ ಸನ್ನೆಗಳಲ್ಲಿಯೇ ಪ್ರತಿಕ್ರಿಯೆ ಹಾಗೂ ಪ್ರತಿ ಸ್ಪಂದನ ನೀಡುತ್ತಿದ್ದ ಹನ್ವಿಕಾ, ಕುಟುಂಬದವರ ಪ್ರೋತ್ಸಾಹದಿಂದ ಎಲ್ಲರನ್ನು ತನ್ನೆಡೆಗೆ ನೋಡುವಂತಹ ಆಕರ್ಷಣೆಯನ್ನು ನಿರ್ಮಾಣ ಮಾಡಿದ್ದಾಳೆ.
ಪುಟಾಣಿ ಹನ್ವಿಕಾ 30ಕ್ಕೂ ಹೆಚ್ಚು ತರಕಾರಿಗಳು ಗುರುತಿಸುವುದು, 40ಕ್ಕೂ ಹೆಚ್ಚು ಪ್ರಾಣಿಗಳನ್ನು ಗುರುತಿಸುವುದು, 20ಕ್ಕೂ ಹೆಚ್ಚು ವಾಹನಗಳು, 30 ಬಗೆಯ ಹಣ್ಣುಗಳು, 11 ಪ್ರಸಾಧನ ಉತ್ಪನ್ನಗಳು, ಮನುಷ್ಯನ ದೇಹದ 20 ಭಾಗಗಳು, 30 ಪಕ್ಷಿಗಳು, 9 ವಿವಿಧ ಬಟ್ಟೆಗಳು, 10 ಭಾವನೆಗಳನ್ನು ವ್ಯಕ್ತಪಡಿಸುವುದು, 100ಕ್ಕಿಂತ ಜಾಸ್ತಿ ಶಬ್ದವನ್ನು ಪುನರಾವರ್ತಿಸುವುದು, ಅ- ಅಃ, ಎ-ಝಡ್ ಪುನರಾವರ್ತಿಸಿ ದಾಖಲೆ ಮಾಡಿದ್ದಾಳೆ.
ಹಾಗೆಯೇ ಈ ವಯಸ್ಸಲ್ಲಿ ಯಾರೂ ಎತ್ತಿತರದ ಭಾರವನ್ನು ಎತ್ತಿದ ಮಗು ಎಂದು ಗುರುತಿಸಲಾಗಿದೆ. ಲೆಮನ್ ಆ್ಯಂಡ್ ಸ್ಫೂನ್ ಕೇವಲ 1 ನಿಮಿಷ 25 ಸೆಕೆಂಡ್‌ಗಳಲ್ಲಿ 125 ಮೀಟರ್ ಅತಿ ವೇಗವಾಗಿ ನಡೆದುಕೊಂಡು ಈ ಪುಟಾಣಿ ಬ್ಯಾಲೆನ್ಸ್ ಮಾಡಿದ್ದಾಳೆ.
ಸಣ್ಣ ವಯಸ್ಸಿನಲ್ಲಿ ಹನ್ವಿಕಾ ಮಾಡುತ್ತಿದ್ದ ಸಂವಹನ ಪ್ರಕ್ರಿಯೆ ಗ್ರಹಿಕಾ ಸಾಮರ್ಥ್ಯ ಕಂಡು ಪ್ರೋತ್ಸಾಹ ನೀಡಿದ್ದರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಆಕೆಗೆ ಎರಡು ಪ್ರಮುಖ ಪ್ರಶಸ್ತಿಗಳು ದೊರಕಿದ್ದು ಸಂತಸವಾಗಿದೆಶ್ವೇತಾ ದೇವಾಡಿಗ ಹನ್ವಿಕಾ ತಾಯಿ
ಒಂದು ವರ್ಷ 9 ತಿಂಗಳಿನಲ್ಲೇ ವಿಶ್ವ ಮತ್ತು ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆಂದು ತುಂಬಾ ಹೆಮ್ಮೆ ಎನಿಸುತ್ತಿದೆ. ಅವಳ ಈ ಸಾಧನೆ ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿಸಚೀಂದ್ರ ಆರ್. ದೇವಾಡಿಗ ಹನ್ವಿಕಾ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.