
ಕುಂದಾಪುರ: ಐತಿಹಾಸಿಕ ಹಾಗೂ ಪ್ರಾಚೀನ ದೇವಾಲಯ ಎಂಬ ಹಿರಿಮೆಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವ ಜಾತ್ರೆ ‘ಕೊಡಿ ಹಬ್ಬ’ ಯಶಸ್ಸಿಗಾಗಿ ಸಹಕಾರ ನೀಡಬೇಕು ಎಂದು ಕುಂದಾಪುರ ಠಾಣೆಯ ನಿರೀಕ್ಷಕ ಜಯರಾಮ್ ಡಿ ಗೌಡ ಹೇಳಿದರು.
ದೇವಸ್ಥಾನದಲ್ಲಿ ಡಿ.4ರಂದು ನಡೆಯಲಿರುವ ವಾರ್ಷಿಕ ಶ್ರೀ ಮನ್ಮಹಾರಥೋತ್ಸವದ ಪ್ರಯುಕ್ತ ದೇವಳದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕರಾವಳಿ ಭಾಗದ ದೊಡ್ಡ ಜಾತ್ರೆ ಇದು. ಈ ಸಂದರ್ಭ ಕಾನೂನು ಸುವವ್ಯಸ್ಥೆ ಕಾಪಾಡಬೇಕಾಗಿದೆ. ಗೊಂದಲವಿಲ್ಲದೆ ವಾಹನ ಪಾರ್ಕಿಂಗ್ ಆಗಬೇಕು. ಕಳ್ಳರು ತಮ್ಮ ಕೈಚಳಕ ತೋರಿಸದಂತೆ ನೋಡಬೇಕು. ಅಹಿತಕರ ಘಟನೆಗಳಿಗೆ ಆಸ್ಪದ ನಿಡಲೇಬಾರದು. ಇದಕ್ಕೆ ಇಲ್ಲಿನ ವ್ಯಾಪಾರಸ್ಥರು ಸೇರಿದಂತೆ ಎಲ್ಲರ ಸಹಕಾರ ಬೇಕು. ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯದೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಮಾತನಾಡಿ ಜಾತ್ರೆಯ ಯಶಸ್ಸಿಗೆ ಆಡಳಿತ ಮಂಡಳಿ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ. ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಡಳಿತದೊಂದಿಗೆ ಕೈಜೋಡಿಸಬೇಕು. ರಥಬೀದಿಯಲ್ಲಿ ವ್ಯಾಪಾರ ಮಾಡುವವರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಅನುಮತಿ ನೀಡಲಾಗುತ್ತದೆ ಎಂದರು.
ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ್, ಪುಷ್ಪಾ, ಸುದರ್ಶನ್, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್, ಗೋಪಾಡಿ ಮೆಸ್ಕಾಂ ಅಧಿಕಾರಿ ಸುನಿಲ್, ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ನಾಯ್ಕ್ ಮಾಹಿತಿ ನೀಡಿದರು.
ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧಾಕರ ನಂಬಿಯಾರ್, ಎ.ರಾಜೀವ ಶೆಟ್ಟಿ, ಗಣಪ ಪೂಜಾರಿ, ಉಷಾ ಬಂಗೇರ ಮಾರ್ಕೋಡು, ಕೆ.ಎಸ್ ನೇತ್ರಾವತಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ, ಪಿಡಿಒ ದಿನೇಶ್ ನಾಯ್ಕ್, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಜಿ ಪೂಜಾರಿ, ಪಿಡಿಒ ಪ್ರಕಾಶ್ ಪೂಜಾರಿ ಗುಜ್ಜಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸುರೇಶ್ ಬೆಟ್ಟಿನ್ ಪಾಲ್ಗೊಂಡಿದ್ದರು. ಕೆ.ಜಿ.ವೈದ್ಯ ನಿರೂಪಿಸಿದರು. ಸುಧಾಕರ್ ನಂಬಿಯಾರ್ ಸ್ವಾಗತಿಸಿದರು. ಉಷಾ ಬಂಗೇರ ಮಾರ್ಕೋಡು ವಂದಿಸಿದರು. ಗಾಯಿತ್ರಿ ಆಚಾರ್ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.