ಕುಂದಾಪುರ: ನೊಂದ, ಶೋಷಣೆಗೆ ಒಳಗಾದ ಜನರಿಗೆ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಮಾನವತಾವಾದಿ ಅಂಬೇಡ್ಕರ್ ಅವರು ದೇಶದ ಸಾಮಾಜಿಕ ಕ್ರಾಂತಿಯ ಯುಗ ಪುರುಷ ಎಂದು ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿ, ಕುಂದಾಪುರ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯಲ್ಲಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ದೇಶದ ಜನರು ಇಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಜಗತ್ತೆ ಮೆಚ್ಚುವ ನಮ್ಮ ಸಂವಿಧಾನ. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅದರಲ್ಲಿನ ಒಳ್ಳೆಯ ಅಂಶಗಳನ್ನು ಹೆಕ್ಕಿ ತಂದು, ಭಾರತದ ಸಂವಿಧಾನ ಜನಪರವಾಗಿರಬೇಕು ಎಂಬ ಉದ್ದೇಶದಿಂದ ವಸ್ತುಸ್ಥಿತಿ ವಿಚಾರ– ವಿಮರ್ಶೆ ನಡೆಸಿ ಸಂವಿಧಾನ ರಚಿಸಿರುವುದರಿಂದ ದೇಶ ಇಂದು ಸಮಾನ, ಸುಃಸ್ಥಿತಿಯಲ್ಲಿದೆ. ನಮ್ಮದು ಸಜೀವ ಸಂವಿಧಾನವಾಗಿದ್ದು, ನಿತ್ಯವೂ ಉಸಿರಾಡುತ್ತಿದೆ. ಪರಿಸ್ಥಿತಿಯ ಅವಕಾಶಗಳಿಗಾಗಿ 126 ಬಾರಿ ತಿದ್ದುಪಡಿಯಾಗಿದ್ದರೂ, ಮೂಲ ಉದ್ದೇಶಗಳನ್ನು ಹಾಗೆಯೇ ಉಳಿಸಿಕೊಂಡಿದೆ ಎಂದರು.
ಶಿಕ್ಷಣ ವ್ಯಕ‌್ತಿಗೆ ಬಲ ನೀಡುತ್ತದೆ ಎನ್ನುವುದರಲ್ಲಿ ವಿಶ್ವಾಸ ಇಟ್ಟಿದ್ದ ಅಂಬೇಡ್ಕರ್ ಅವರ ಆಶಯಗಳಿಗೆ ಶಕ್ತಿ ನೀಡಲು, ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಸಂಕಲ್ಪ ಪೋಷಕರದ್ದಾಗಬೇಕು ಎಂದರು.
ತೆಂಗಿನ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಉಪ ತಹಶೀಲ್ದಾರ್ ವಿನಯ್ ಅವರು, ಜಾತಿ, ವ್ಯಕ್ತಿಯಾಧಾರಿತ ವ್ಯವಸ್ಥೆ ನಡುವೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಭಾರತ ರತ್ನ ಅಂಬೇಡ್ಕರ್ ಅವರು, ಶಿಕ್ಷಣದಿಂದ ಬಲಯುತರಾಗಿ ಎನ್ನುವ ಸಂದೇಶವನ್ನು ವಿಶ್ವವ್ಯಾಪಿಯಾಗಿಸಿದ್ದರು ಎಂದರು.
ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಅಂಬೇಡ್ಕರ್ ಜಯಂತಿ ಉದ್ಘಾಟಿಸಿದರು. ತಹಶೀಲ್ದಾರ್ ಪ್ರದೀಪ್ ಕುಡೈಕರ್ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿದರು. ದಸಂಸ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಪುರಸಭೆ ಮುಖ್ಯಾಧಿಕಾರಿ ಆನಂದ್ ಅವರು ಅಂಬೇಡ್ಕರ್ ಅವರ ವಿಚಾರ ಮಂಡನೆ ಮಾಡಿದರು. ಪೊಲೀಸ್ ನಿರೀಕ್ಷಕ ನಂಜಪ್ಪ ಎನ್. ನಾಯಕ್ ಜಾಥಾಕ್ಕೆ ಚಾಲನೆ ನೀಡಿದರು. ಉದ್ಯಮಿ ರತ್ನಾಕರ ಶೆಟ್ಟಿ ಪಡುಮಂಡು ಕರ್ನಾಟಕ ಭೀಮ ಘರ್ಜನೆ ಅಧ್ಯಯನ ಕೇಂದ್ರ ಹಾಗೂ ತರಬೇತಿ ಸಂಸ್ಥೆ ಉದ್ಘಾಟಿಸಿದರು. ಗೌತಮ ತಲ್ಲೂರು ಸಂವಿಧಾನ ಪೀಠಿಕೆ ಓದು ನೆರವೇರಿಸಿದರು.
ದಸಂಸ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರ ಅಲ್ತಾರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಐ ನಂಜಾ ನಾಯ್ಕ್, ಸಂಘಟನೆ ರಾಜ್ಯ ಖಜಾಂಜಿ ಡಾ.ದೊಡ್ಡಪ್ಪ ಪೂಜಾರಿ, ರಾಜ್ಯ ನೀಲಿ ಸೈನ್ಯ ಉಪಾಧ್ಯಕ್ಷ ಸದಾಂ ಹುಸೇನ್ ಯಾದಗಿರಿ, ಪುರಸಭೆ ಸದಸ್ಯರಾದ ಕೆ. ಗಿರೀಶ್ ದೇವಾಡಿಗ, ಚಂದ್ರಶೇಖರ ಖಾರ್ವಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರಮೇಶ್ ಕುಲಾಲ್, ಲಾವಣ್ಯ, ಅಶೋಕ ದೇವಾಡಿಗ ಹಟ್ಟಿಯಂಗಡಿ, ಅಣ್ಣಪ್ಪ ಶೆಟ್ಟಿ ಹರ್ಕೂರು, ಸಂಘಟನೆಯ ಜಿಲ್ಲಾ ಸಂಘಟಕರಾದ ಯು. ನಾರಾಯಣ, ರಾಘ ಶಿರೂರು, ಶಶಿಧರ ಬಳ್ಕೂರು, ವಿಠ್ಠಲ್ ಸಾಲಿಕೇರಿ, ಸಂಜೀವ ಪಳ್ಳಿ, ಸುಧಾಕರ ಸುರ್ಗೋಳಿ, ರಾಜೇಶ್ ಕೆಮ್ಮಣ್ಣು, ತಾಲ್ಲೂಕು ಸಂಚಾಲಕರಾದ ಸಂದೇಶ್ ನಾಡ, ಸತೀಶ್ ಸುರ್ಗೋಳಿ, ಭಾಸ್ಕರ, ಸುಂದರ ನೀರೆ, ಸುರೇಂದ್ರ ಬಜಗೋಳಿ ತಲ್ಲೂರು ಗ್ರಾಮಾಭಿವೃಧ್ಧಿ ಅಧಿಕಾರಿ ನಾಗರತ್ನ ಜಿ. ಭಾಗವಹಿಸಿದ್ದರು.
ಜಿಲ್ಲಾ ಮಟ್ಟದ ಭೀಮರತ್ನ ಪ್ರಶಸ್ತಿ ಪುರಸ್ಕೃತರಾದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ, ದಸಂಸ ತಾಲ್ಲೂಕು ಸಂಚಾಲಕರಾದ ಮಂಜುನಾಥ ಜಿ, ಕೃಷ್ಣ ಅಲ್ತಾರು, ಪತ್ರಕರ್ತ ಎಸ್. ಸತೀಶ್ ಕುಮಾರ್ ಕೋಟೇಶ್ವರ, ಪುರಸಭೆ ಪೌರ ಕಾರ್ಮಿಕ ಯೋಗೀಶ್ ಕೆ. ಅವರನ್ನು ಗೌರವಿಸಲಾಯಿತು. ಸುಮಲತಾ ಬಜಗೋಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.