
ಉಡುಪಿ: ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕಾರ್ನಾಟಕ–ಕೇರಳ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ 15ನೇ ದಿನಕ್ಕೆ ಕಾಲಿರಿಸಿದ್ದು, ಕೊರಗ ಸಮುದಾಯದವರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.
ಒಕ್ಕೂಟದ ಸಂಚಾಲಕ ಕೆ. ಪುತ್ರನ್ ಮಾತನಾಡಿ, ‘ನಮ್ಮ ಸಮುದಾಯದ ಯುವ ಜನರಲ್ಲಿ ಈಗಲೂ, ಹಿಂಜರಿಕೆ, ಕೀಳರಿಮೆ ಇದೆ. ಆದ್ದರಿಂದ ಅವರು ಕೆಲವೊಂದು ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿಲ್ಲ. ಈ ಕಾರಣಕ್ಕೆ ನಮ್ಮವರಿಗೆ ನೇರ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.
‘ನಮ್ಮ ಯುವಕರು ವಿದ್ಯಾವಂತರಾಗಿದ್ದರೂ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಪಡೆದವರಿಗೆ ಉತ್ತಮ ನೌಕರಿ ಸಿಗಬೇಕೆಂದು ಪ್ರತಿಭಟನೆ ಮಾಡುತ್ತಿದ್ದೇವೆ. ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗ, ನೇರ ನೇಮಕಾತಿ ನಡೆಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ಆದರೆ ಅದು ಇದುವರೆಗೂ ಈಡೇರಿಲ್ಲ’ ಎಂದರು.
‘ಇಂದಿನ ಸ್ಪರ್ಧಾತ್ಮಕ ಸಂದರ್ಭದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬುದೇ ಕೊರಗ ಸಮುದಾಯದವರಿಗೆ ಗೊತ್ತಾಗುತ್ತಿಲ್ಲ. ಖಾಸಗಿಯವರೂ ನಮಗೆ ಕೆಲಸ ಕೊಡುವುದಿಲ್ಲ. ಸರ್ಕಾರಿ ಉದ್ಯೋಗವೂ ಸಿಗುವುದಿಲ್ಲ’ ಎಂದು ಕೊರಗ ಸಮುದಾಯದ ಪ್ರವೀಣ್ ತಿಳಿಸಿದರು.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಶೇಖರ್ ಕೆಂಜೂರು, ಭಾರತಿ ಎಲ್ಲೂರು, ಬೋಗ್ರ ಕೊಕ್ಕರ್ಣೆ, ದೀಪಾ, ದಿವ್ಯಾ, ದಿವಾಕರ, ರೇಖಾ, ತ್ರಿವೇಣಿ ಪಾಲ್ಗೊಂಡಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ನಮ್ಮ ಸಮುದಾಯದ ಪದವೀಧರರಿಗೆ ಕಸ ಗುಡಿಸುವ ಕೆಲಸ ನೀಡಲಾಗುತ್ತಿದೆ. ಆ ಕೆಲಸವನ್ನು ಮಾತ್ರ ಕರೆದು ಕೊಡುತ್ತಾರೆ. ಯಾವುದೇ ಕಚೇರಿ ಕೆಲಸ ನೀಡುವುದಿಲ್ಲಪ್ರವೀಣ್ ಬಿ.ಇ. ಪದವೀಧರ
ಊರಿನಲ್ಲಿ ನಾವು ಸ್ವಚ್ಛತೆ ಕೆಲಸಕ್ಕಷ್ಟೇ ಸೀಮಿತರಾಗಿದ್ದೇವೆ. ಅದಕ್ಕಾಗಿ ಊರು ಬಿಟ್ಟು ಬೆಂಗಳೂರಿನಂತಹ ನಗರಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತೇವೆದಿವ್ಯಾ ಕೊರಗ ಸಮುದಾಯದ ಯುವತಿ
ನಮ್ಮ ಪಾಲಕರು ಇನ್ನೂ ದುಡಿಯುತ್ತಿದ್ದಾರೆ. ಅವರನ್ನು ಉತ್ತಮವಾಗಿ ನೋಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಸ್ಥಿತಿ ಇನ್ನೂ ಸುಧಾರಿಸಿಲ್ಲದೀಪಾ ಎಂ.ಎ. ಬಿ.ಇಡಿ. ಪದವೀಧರೆ
ಕೆಲಸ ಕೊಡಿ ಎಂದು ಜಿಲ್ಲಾಧಿಕಾರಿ ಕಚೇರಿ ತಾಲ್ಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೂ ನಮ್ಮ ಅರ್ಜಿಯನ್ನು ಪರಿಗಣಿಸುವವರೇ ಇಲ್ಲಪ್ರೀತಿ ಎಂ.ಕಾಂ. ಪದವೀಧರೆ
‘14 ದಿನ ಸ್ಥಳಕ್ಕೆ ಬಾರದ ಡಿ.ಸಿ’
‘ಹದಿನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದರೂ ಜಿಲ್ಲಾಧಿಕಾರಿಯವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿಲ್ಲ. ಇದು ನಮಗೆ ಬೇಸರ ತರಿಸಿದೆ. ಈ ಕಾರಣಕ್ಕೆ ಇಂದು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದ್ದೇವೆ. ಹದಿನೈದನೇ ದಿನವಾದ ಸೋಮವಾರ ಜಿಲ್ಲಾಧಿಕಾರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು’ ಎಂದು ಒಕ್ಕೂಟದ ಸಂಚಾಲಕ ಕೆ. ಪುತ್ರನ್ ತಿಳಿಸಿದರು. ‘ಜಿಲ್ಲಾಧಿಕಾರಿ ಮುಖಾಂತರ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆವು. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.