
ಕುಂದಾಪುರ: ಆಲೂರಿನ ಕೆಲ ಕೊರಗ ಕುಟುಂಬಗಳು ಇಂದಿಗೂ ಅಜಲು ಪದ್ಧತಿಯಂತೆ ಮಾಲಕರ ಭೂಮಿಯಲ್ಲಿ ದುಡಿಯುತ್ತಿದ್ದಾರೆ. ಭೂಮಾಲಕರು ಭೂಮಿ ನೀಡಲು ಸಿದ್ಧರಿದ್ದರೂ ತಾಲ್ಲೂಕು ಆಡಳಿತ ಭೂಮಿಯನ್ನು ಕೊರಗ ಸಮುದಾಯದವರಿಗೆ ಕೊಡಿಸಲು ವಿಫಲವಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ್ ನಾಡ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಆಲೂರು, ಹಕೂರು ಗ್ರಾಮದಲ್ಲಿ 13 ಕೊರಗ ಕುಟುಂಬಗಳಿಗೆ ಕೂಡಲೇ ಹಕ್ಕುಪತ್ರನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಆರಂಭವಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
2016 ರಿಂದ ನಿರಂತರವಾಗಿ 10 ವರ್ಷಗಳ ಕಾಲ ಆಲೂರು-ಹರ್ಕೂರು ಗ್ರಾಮದಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ ಹಾಗೂ ಸರ್ಕಾರಿ ಭೂಮಿಯಲ್ಲಿ ಡಾ.ಮಹಮ್ಮದ್ ಫೀರ್ ವರದಿ ಅನ್ವಯ ಕನಿಷ್ಠ ತಲಾ ಒಂದು ಎಕರೆಯಂತೆ 13 ಕೊರಗ ಕುಟುಂಬಗಳಿಗೆ ಭೂಮಿ ನೀಡಲು ಸಾಕಷ್ಟು ಬಾರಿ ಧರಣಿ, ಮನವಿ ನೀಡುತ್ತಾ ಬಂದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೊರಗ ಸಮುದಾಯದವರು ಧರಣಿ ನಡೆಸುವಂತೆ ತಾಲ್ಲೂಕು ಆಡಳಿತವೇ ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತಾಗಿದೆ. ಶೋಷಿತ ವರ್ಗ ಹಕ್ಕುಗಳಿಗಾಗಿ ಹೋರಾಡುವ ಸ್ಥಿತಿ ಬಂದದ್ದು ಆಡಳಿತಕ್ಕೆ ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದರು.
ಆಲೂರು- ಹರ್ಕೂರು ಗ್ರಾಮದಲ್ಲಿ ಭೂಮಿ ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಕೈಚೆಲ್ಲಿ ಕುಳಿತಾಗ ನಮ್ಮ ಸಂಘಟನೆ ಕೊರಗ ಸಮುದಾಯದ ಮುತುವರ್ಜಿಯಿಂದ ಸ್ವತಃ ಭೂಮಿ ಗುರುತಿಸಿ ತಾಲ್ಲೂಕು ಆಡಳಿತಕ್ಕೆ ದಾಖಲೆಗಳು ಸಲ್ಲಿಸಿದಾಗ ಜಂಟಿ ಸರ್ವೆ ನಡೆಸಲಾಗಿದ್ದು. ಪ್ರಸ್ತುತವಾಗಿ ಸರ್ವೇ ನಕ್ಷೆ, ಮಹಜರು, ಹೇಳಿಕೆ, ಗ್ರಾಮ ಆಡಳಿತ ಅಧಿಕಾರಿಯವರು ಮತ್ತು ವಂಡ್ಸೆ ಕಂದಾಯ ನೀರಿಕ್ಷಕರ ವರದಿಯೂ ತಾಲ್ಲೂಕು ಆಡಳಿತದ ಕೈ ಸೇರಿದ್ದರೂ, ಈವರೆಗೂ ಭೂಮಿ ಹಕ್ಕು ಪತ್ರ ನೀಡಲು ಬೇಕಾದ ಪ್ರಕ್ರಿಯೆಯೇ ನಡೆದಿಲ್ಲ. ಈ ಹಿಂದೆ 10 ದಿನದಲ್ಲಿ ಮಂಜೂರಾತಿ ಪ್ರಕ್ರಿಯೆಗೆ ಬೇಕಾದ ಅಗತ್ಯ ಕ್ರಮವಹಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಹಾಗೇ ಉಳಿದಿದೆ ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಉಪತಹಶೀಲ್ದಾರ್ ವಿನಯ್ ಅವರು, ಕೆಸಿಡಿಸಿ ಭೂಮಿಯ ಗೊಂದಲದಿಂದಾಗಿ ಸಮಸ್ಯೆ ಬಾಕಿ ಇದೆ. ಕಂದಾಯ ಇಲಾಖೆ ಭೂಮಿ ನೀಡಲು ಸಿದ್ಧವಾಗಿದೆ. ಗೇರು ನಿಗಮದ ಭೂಮಿ ದಾಖಲೆ ಸರಿಪಡಿಸದೇ ನೀಡಿದರೆ ಮುಂದಿನ ದಿನಗಳಲ್ಲಿ ಅಲ್ಲಿ ವಾಸಿಸುವವರಿಗೆ ತೊಂದರೆಯಾಗುತ್ತದೆ. ಈ ಕುರಿತು ಅರಣ್ಯ ಇಲಾಖೆ ಅಭಿಪ್ರಾಯ ಪಡೆದು ಮುಂದುವರೆಯಲಾಗುವುದು. ಈ ಸಂಬಂಧ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಆಲೂರು ಗ್ರಾಮದಲ್ಲಿ ಮತ್ತು ಹರ್ಕೂರು ಗ್ರಾಮದಲ್ಲಿ 2 ಎಕರೆ ಭೂಮಿ ಈಗಾಲೇ ಜಂಟಿ ಸರ್ವೆ ನಡೆಸಿ ನಕ್ಷೆ ಸಿದ್ಧವಾಗಿದ್ದು ಕೂಡಲೇ ಕೊರಗ ಕುಟುಂಬಗಳಿಗೆ ಈ ಭೂಮಿಯನ್ನು ಹಂಚಿಕೆ ಮಾಡಿ ಹಕ್ಕು ಪತ್ರ ನೀಡಬೇಕು. ಅನಾದಿಕಾಲದಿಂದ ವಾಸವಿರುವ ದುರ್ಗಿ, ಅಕ್ಕಮ್ಮ, ಬಚ್ಚಿ ಈ ಮೂರು ಕೊರಗ ಕುಟುಂಬಗಳಿಗೆ ಅವರ ಹೆಸರಿಗೆ ಭೂಮಿಯನ್ನು ನೋಂದಣಿ ಮಾಡಿ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು. ಅವರ ಭೂಮಿ ಅವರಿಗೆ ಸಿಗಲು ಕ್ರಮ ವಹಿಸಬೇಕು. ಮಂಗಳವಾರ ನಡೆಯುವ ದಲಿತ ಕುಂದು ಕೊರತೆ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದು, ಈ ಸಮಸ್ಯೆಗೆ ಉತ್ತರಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರಮುಖರಾದ ಶೀಲಾವತಿ ನಾಡ, ವೆಂಕಟೇಶ ಕೋಣಿ, ಎಚ್.ನರಸಿಂಹ, ಮಹಾಬಲ ವಡೇರಹೋಬಳಿ ಮೊದಲಾದವರು ಇದ್ದರು.
ತಾಲ್ಲೂಕು ಆಡಳಿತದ ವಿಳಂಬದಿಂದಾಗಿಯೇ ಧರಣಿ ನಡೆಸುವ ಸ್ಥಿತಿ ಬಂದಿದೆ. ಭರವಸೆ ಬೇಡ ಹಕ್ಕುಪತ್ರ ಕೊಡಿ. ಅರಣ್ಯ ಇಲಾಖೆ ಆಕ್ಷೇಪವಿದ್ದರೆ ಅವರನ್ನು ಇಲ್ಲಿಗೆ ಬರಲು ಹೇಳಿ ಇತ್ಯರ್ಥ ಮಾಡಿ–ಸುರೇಶ್ ಕಲ್ಲಾಗರ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.