ಕುಂದಾಪುರ: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿ ಇರಬೇಕು. ಮಧ್ಯವರ್ತಿಗಳ ಮೂಲಕ ಕಡತ ವಿಲೇವಾರಿ, ಭ್ರಷ್ಟಾಚಾರ ಮಾಡಿರುವ ಬಗ್ಗೆ ಸಾಕ್ಷ್ಯ ಲಭಿಸಿದರೆ ಮಧ್ಯವರ್ತಿ ಸಹಿತ ಅಧಿಕಾರಿ, ಸಿಬ್ಬಂದಿಯನ್ನು ಬಂಧಿಸಲಾಗುತ್ತದೆ ಎಂದು ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ತಿಳಿಸಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಸಿಬ್ಬಂದಿ ಸಾರ್ವಜನಿಕರೊಂದಿಗೆ ನೇರ ಹಾಗೂ ಸರಿಯಾದ ರೀತಿಯಲ್ಲಿ ಸಂವಹನ, ಸ್ಪಂದನೆ ಮಾಡದೆ ಇರುವುದರಿಂದಾಗಿ ಲೋಕಾಯುಕ್ತ ಬಳಿ ಜನ ಬರುತ್ತಾರೆ. ಯಾವುದೇ ಅರ್ಜಿಯನ್ನೂ ನಿರಾಕರಿಸುವಂತಿಲ್ಲ. ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಿಂಬರಹವನ್ನಾದರೂ ನೀಡಬೇಕು. ಆಡಳಿತಾತ್ಮಕ ವಿಚಾರ, ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಿವೃತ್ತಿಯಾದರೂ ಅಕಾರಣವಾಗಿ ಪಿಂಚಣಿ ಕೊಡದೆ ಇರುವ ಪ್ರಕರಣಗಳು ದಾಖಲಾಗುತ್ತವೆ. ಇಲಾಖೆಯೊಳಗೆ ಭ್ರಷ್ಟಾಚಾರ ನಡೆದ, ಮೇಲಧಿಕಾರಿಗಳಿಂದ ಕೆಳ ಹಂತದ ಸಿಬ್ಬಂದಿಗೆ ಲಂಚಕ್ಕೆ ಒತ್ತಡ ಹಾಕಿದ ಪ್ರಕರಣಗಳು ಕೂಡಾ ದಾಖಲಾಗುತ್ತವೆ. ಲೋಕಾಯುಕ್ತಕ್ಕೆ ಮಾಹಿತಿ ನೀಡಿದರೆ ತೊಂದರೆಯಾಗುತ್ತದೆ ಎನ್ನುವ ಭಯ ಬೇಡ. ಗೌಪ್ಯತೆ ಕಾಯಲಾಗುವುದು ಎಂದು ವಿವರಿಸಿದರು.
ಭ್ರಷ್ಟಾಚಾರ ಕಡಿಮೆ ಆಗಬೇಕು. ನಗದು ಬದಲು ಸಂಬಂಧಿಸಿದವರ ಬಂಧುಗಳ ಖಾತೆಗೆ ಲಂಚದ ಹಣ ವರ್ಗಾಯಿಸಿದರೂ ಅದು ಲಂಚದ ವ್ಯಾಪ್ತಿಗೆ ಬರುತ್ತದೆ. ಪ್ರತ್ಯಕ್ಷ ಸಾಕ್ಷಿಗಳಿಗಿಂತ ವೈಜ್ಞಾನಿಕ ಸಾಕ್ಷಿಗಳ ಮೂಲಕ ಹೆಚ್ಚು ಪ್ರಕರಣ ಶಿಕ್ಷೆಗೆ ಅರ್ಹವಾಗುತ್ತದೆ. ಕಾರವಾರದಲ್ಲಿ ಒಂದು ವರ್ಷದಲ್ಲಿ ದಾಖಲಾದ 16 ಪ್ರಕರಣಗಳಲ್ಲಿ 11 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ತಿಳಿಸಿದರು.
ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯಕ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರು ದೂರು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.