
ಕುಂದಾಪುರ: ಅನಧಿಕೃತ ಗೂಡಂಗಡಿಗಳ ತೆರವಿನಲ್ಲಿ ತಾರತಮ್ಯ ಮಾಡಲಾಗಿದೆ. ಯುಜಿಡಿ ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಭರವಸೆಗಳನ್ನು ಈಡೇರಿಸಲೇ ಇಲ್ಲ. ಆಡಳಿತದ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಇದು ಸಾಧ್ಯವಾಗಿಲ್ಲ ಎಂದು ಪುರಸಭೆ ಸದಸ್ಯ ಗಿರೀಶ್ ಜಿ.ಕೆ. ಹೇಳಿದರು.
ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಯುಜಿಡಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಆಡಳಿತ ಮಂಡಳಿ ನಿವಾರಿಸಿದರೂ ಅಧಿಕಾರಿಗಳು ಮುಂದುವರಿಯಲಿಲ್ಲ. ಸಂಬಂಧಪಟ್ಟವರು ಸಭೆಗೆ ಬರುವುದಿಲ್ಲ, ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ಸಭೆಗೆ ಗೌರವ ಕೊಡುತ್ತಿಲ್ಲ ಎಂದರು.
ಪಾರ್ಕಿಂಗ್ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಚರ್ಚೆ ಆಗುತ್ತಿದೆ. ಸರ್ವೆ ಆಗಿದೆ. ಆದರೆ ಗಜೆಟ್ ನೋಟಿಫಿಕೇಶನ್ ಹೇಗೆ ಹೊರಡಿಸಬೇಕು, ಕಡತ ತಯಾರಿ ಹೇಗೆ ಎಂದು ಅರಿಯದ ಅಧಿಕಾರಿಗಳು ಇದ್ದರೆ ಪುರಸಭೆ ಹೇಗೆ ಆಡಳಿತ ನಡೆಸುತ್ತದೆ ಎಂದು ಅವರು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗೆ ಕಳಿಸಿದ ಕಡತ ಮರಳಿ ಬಂದು ಎರಡು ತಿಂಗಳುಗಳಾಗಿವೆ. ಅದರ ಮಾಹಿತಿಯನ್ನೂ ನೀಡದೆ, ಸರಿಯಾದ ಕಡತವನ್ನೂ ತಯಾರಿಸದೇ, ಪುರಸಭೆಯಿಂದ ಅಧಿಕೃತವಾಗಿ ಹೋಗಬೇಕಾದ ಕಡತವನ್ನು ಪೊಲೀಸ್ ಇಲಾಖೆ ಮೂಲಕ ಕಳಿಸಿ ತಿರಸ್ಕೃತವಾಗುವಂತೆ ಮಾಡಿದ ಅಧಿಕಾರಿಯ ಬೇಜವಾಬ್ದಾರಿತನ ಕಾಣುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಕೆಲಸ ಮಾಡಬೇಕು, ಕಾನೂನು ಪಾಲನೆ ಮಾಡಬೇಕು. ಪುರಸಭೆ ಎಚ್ಚರದಲ್ಲಿದೆ ಎಂದು ಜನರಿಗೆ ತೋರಿಸಿಕೊಡಬೇಕು ಎಂದು ಸದಸ್ಯ ಶ್ರೀಧರ್ ಶೇರೆಗಾರ್ ಹೇಳಿದರು.
ಹೂವಿನ ಮಾರುಕಟ್ಟೆ ಬಳಿ ಡಾ. ಅಂಬೇಡ್ಕರ್ ವೃತ್ತ ನಿರ್ಮಾಣದ ಕುರಿತು ನಿರ್ಲಕ್ಷ್ಯ ಇದೆ ಎಂದು ಅಸಮಾಧಾನ ತೋಡಿಕೊಂಡ ವಿ.ಪ್ರಭಾಕರ ಅವರು, ನಮ್ಮದೇ ಪಕ್ಷದ ಆಡಳಿತವಿದ್ದರೂ ತಳ ಸಮುದಾಯದ ನಾಯಕರಿಗೆ ಇಲ್ಲಿ ಸರಿಯಾದ ರೀತಿಯಲ್ಲಿ ಗೌರವ ದೊರಕುತ್ತಿಲ್ಲ ಎಂದು ಬೇಸರ ಹೊರ ಹಾಕಿದರು. ಇದಕ್ಕೆ ಚಂದ್ರಶೇಖರ ಖಾರ್ವಿ, ಗಿರೀಶ್ ಜಿ.ಕೆ, ಒಬ್ಬರು ಮಹಮ್ಮದ್, ವೀಣಾ ಭಾಸ್ಕರ್ ಬೆಂಬಲವಾಗಿ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಕಡತ ಮರಳಿದ ಕುರಿತು ಮುಖ್ಯಾಧಿಕಾರಿ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಸಭೆಯಲ್ಲಿ ಚರ್ಚೆಯಾಯಿತು.
ಸಭೆಯಲ್ಲಿ ನಿರ್ಣಯ ಮಾಡಿದರೂ ಅನುಷ್ಠಾನವಾಗುವುದಿಲ್ಲ ಎಂದು ಸಂತೋಷ ಶೆಟ್ಟಿ ಹೇಳಿದರು. ಯುಜಿಡಿ ಕಾಮಗಾರಿ ಆಗದೆ ಸಂಗ್ರಹಿಸಿದ ತ್ಯಾಜ್ಯ ನಮ್ಮ ವಾರ್ಡ್‌ನಲ್ಲಿ ಶೇಖರಣೆಯಾಗುತ್ತದೆ ಎಂದು ರಾಘವೇಂದ್ರ ಖಾರ್ವಿ ಹೇಳಿದರು. ಹೊರ ಗುತ್ತಿಗೆ ನೌಕರರಿಗೆ 7 ತಿಂಗಳಿಂದ ವೇತನ ಆಗುತ್ತಿಲ್ಲ ಎಂದು ಶಶಿಧರ್ ಹಾಗೂ ಅಶೋಕ್ ಗಮನ ಸೆಳೆದರು. ನಮ್ಮವರನ್ನು ತ್ಯಾಜ್ಯ ಸಂಗ್ರಹಕ್ಕೆ ಕಳುಹಿಸಿ, ಆಯ್ದ ಪೌರ ಕಾರ್ಮಿಕರನ್ನು ಕಚೇರಿ ಕೆಲಸಕ್ಕೆ ಬಳಸಲಾಗುತ್ತಿದೆ ಎಂದು ವಿ.ಪ್ರಭಾಕರ್ ಆಕ್ಷೇಪ ವ್ಯಕ್ತಪಡಿಸಿದರು. ವೀಣಾ ಭಾಸ್ಕರ್ ಮೆಂಡನ್, ರೋಹಿಣಿ ಉದಯ್, ಶ್ರೀಧರ ಶೇರುಗಾರ್ ವಿವಿಧ ವಿಚಾರಗಳ ಪ್ರಾಸ್ತಾಪ ಮಾಡಿದರು.
ಉಪಾಧ್ಯಕ್ಷೆ ವನಿತಾ ಬಿಲ್ಲವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.