ADVERTISEMENT

ಪರೀಕ್ಷೆಯಲ್ಲಿ ನನಗೆ ಇಷ್ಟೇ ಅಂಕಗಳು ಬೇಕು: ದೈವಕ್ಕೆ ಪತ್ರ ಬರೆದ ವಿದ್ಯಾರ್ಥಿ

ವಿದ್ಯಾರ್ಥಿ ಬರೆದ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 15:42 IST
Last Updated 26 ಮಾರ್ಚ್ 2025, 15:42 IST
ಕಾಣಿಕೆ ಹುಂಡಿಯಲ್ಲಿ ದೊರೆತ ವಿದ್ಯಾರ್ಥಿಯ ಮನವಿ ಪತ್ರ
ಕಾಣಿಕೆ ಹುಂಡಿಯಲ್ಲಿ ದೊರೆತ ವಿದ್ಯಾರ್ಥಿಯ ಮನವಿ ಪತ್ರ   

ಕುಂದಾಪುರ: ಪರೀಕ್ಷೆಯಲ್ಲಿ ನನಗೆ ಇಷ್ಟೇ ಅಂಕಗಳು ಬೇಕು ಎಂದು ಬೇಡಿಕೆ ಇರಿಸಿರುವ ವಿದ್ಯಾರ್ಥಿಯೊಬ್ಬ ತನ್ನ ಬೇಡಿಕೆ ಪಟ್ಟಿಯನ್ನು ಬರೆದು, ದೇವರ ಕಾಣಿಕೆ ಡಬ್ಬಿಗೆ ಹಾಕಿರುವ ಘಟನೆ ಹಕ್ಲಾಡಿ ಸಮೀಪದ ಹೊಮ್ಮಿದೆ ಎಂಬಲ್ಲಿ ನಡೆದಿದೆ.

ತಾಲ್ಲೂಕಿನ ಹೊಳ್ಮಗೆ ಬೊಬ್ಬರ್ಯ ದೈವ ಸ್ಥಾನದ ವಾರ್ಷಿಕ ಹಾಲು ಹಬ್ಬ ಹಾಗೂ ಕೆಂಡಸೇವೆ ಮಾರ್ಚ್‌ 14ರಂದು ನಡೆದಿತ್ತು. ಇದಾದ 10 ದಿವಸದ ಬಳಿಕ, ಮಾರ್ಚ್‌ 24ರಂದು ದೈವ ಸ್ಥಾನದ ಆಡಳಿತದವರು ಊರವರ ಉಪಸ್ಥಿತಿಯಲ್ಲಿ ದೇವರ ಕಾಣಿಕೆ ಡಬ್ಬಿ ತೆರೆದಿದ್ದಾರೆ. ಈ ವೇಳೆ ಭಕ್ತರು ಹಾಕಿರುವ ಕಾಣಿಕೆ ಹಣದ ಜೊತೆಗೆ ವಿದ್ಯಾರ್ಥಿ ಓರ್ವನ ಬೇಡಿಕೆ ಇರುವ ಪಟ್ಟಿ ದೊರಕಿದೆ.

ಬೇಡಿಕೆ ಪಟ್ಟಿಯಲ್ಲಿ ವಿದ್ಯಾರ್ಥಿ ಪರೀಕ್ಷಯೆಲ್ಲಿ ಜಸ್ಟ್ ಪಾಸ್ ಮಾಡುವಂತೆ ಕೋರಿಕೊಂಡಿದ್ದಾನೆ. ಗಣಿತದಲ್ಲಿ 36-39, ಇಂಗ್ಲಿಷ್‌ನಲ್ಲಿ 37-39, ಕನ್ನಡದಲ್ಲಿ 39-40, ವಿಜ್ಞಾನದಲ್ಲಿ 38-39, ಹಿಂದಿಯಲ್ಲಿ 39-40 ಹಾಗೂ ಸಮಾಜದಲ್ಲಿ 37-38 ಅಂಕಗಳಿಗೆ ಮನವಿ ಮಾಡಿರುವ ಪತ್ರದ ಮೇಲ್ಭಾಗದಲ್ಲಿ, ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಇರಬೇಕು ದೇವರ ಹೊರ್ ಬೊಬ್ಬರ್ಯ ಎಂದು ಹಾಗೂ ಕೆಳ ಭಾಗದಲ್ಲಿ ಮತ್ತೆ ದೇವರ ಇದರಕಿಂತಲೂ ನನಗೆ ಕಡಿಮೆ ಬೇಡ ದೇವರ ಹೋರ ಬೊಬ್ಬರ್ಯ ಎಂದು ಬರೆದುಕೊಂಡಿದ್ದಾರೆ.

ADVERTISEMENT

ವಿಳಾಸವಿಲ್ಲದ ಪತ್ರ ಬರೆದಿರುವುದು ವಿದ್ಯಾರ್ಥಿಯೋ ಇಲ್ಲ ವಿದ್ಯಾರ್ಥಿನಿಯೋ ಎನ್ನುವ ಗೊಂದಲಗಳಿವೆ. ಯಾವ ತರಗತಿ ಎಂದು ಬರೆದುಕೊಳ್ಳದೆ ಇದ್ದರೂ, ಸದ್ಯ ನಡೆಯುತ್ತಿರುವ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿರುವವರ ಮನವಿ ಇದು ಎನ್ನುವ ಶಂಕೆ ಇದೆ.

ಸದ್ಯ ಕಾಣಿಕೆ ಹುಂಡಿಯಲ್ಲಿ ದೊರೆತಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.