
ಕಾರ್ಕಳ: ತಾಲ್ಲೂಕಿನ ಹಿರ್ಗಾನದ ಕುಂದೇಶ್ವರ ಉತ್ಸವದಲ್ಲಿ ಶುಕ್ರವಾರ ಯಕ್ಷಗಾನ ಭಾಗವತ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಮತ್ತು ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಲೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಾಧಕ ಕಲಾವಿದರನ್ನು ಗೌರವಿಸುವ ಕೆಲಸ ಶ್ಲಾಘನೀಯ ಎಂದರು.
ಶ್ರೀನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕುಂದೇಶ್ವರ ಕ್ಷೇತ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದರು.
ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಉದಯ ಶೆಟ್ಟಿ ಮಾತನಾಡಿ, ಕ್ಷೇತ್ರದ ಮೂಲಸೌಕರ್ಯ ಹೆಚ್ಚಳಕ್ಕೆ ದೇವಸ್ಥಾನದ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದರು.
ಪ್ರಶಸ್ತಿ ಸ್ವೀಕರಿಸಿದ ಕಾವ್ಯಶ್ರೀ ಅಜೇರು ಮಾತನಾಡಿ, ಇಂತಹ ಶ್ರೇಷ್ಠ ಸಮ್ಮಾನದ ಗೌರವಕ್ಕೆ ಪಾತ್ರರಾಗಿರುವುದು ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಯಕ್ಷಗಾನದಲ್ಲಿ ಪ್ರಾಂಜಲ ಮನಸ್ಸಿನಿಂದ ಕಲಾ ಸೇವೆಯನ್ನು ಮಾಡುವೆ ಎಂದರು.
ಕಲಾವಿದ ಉಮೇಶ್ ಮಿಜಾರು ಮಾತನಾಡಿ, ಪುಣ್ಯಕ್ಷೇತ್ರಗಳಲ್ಲಿ ರಂಗಭೂಮಿಯ ಕಲಾವಿದರಿಗೆ ಪ್ರಶಸ್ತಿ ಗೌರವ ನೀಡುವುದರಿಂದ ರಂಗಕಲೆಗಳಿಗೆ ಉತ್ತೇಜನ ಲಭಿಸುತ್ತದೆ ಎಂದರು.
ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ನಿಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ನಾಯಕ್, ಗಂಗಾ ಆರ್.ಭಟ್, ಪ್ರಧಾನ ಅರ್ಚಕ ಕೃಷ್ಣರಾಜೇಂದ್ರ ಭಟ್, ರವೀಂದ್ರ ಭಟ್, ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ, ಸೃಷ್ಟಿ ಕಲಾವಿದ್ಯಾಲಯ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್, ಉದ್ಯಮಿ ಸತೀಶ್ ಭಟ್ ಕುಂದೇಶ್ವರ, ಸಿರಿಯಣ್ಣ ಶೆಟ್ಟಿ, ಪಂಚಾಯಿತಿ ಅಧ್ಯಕ್ಷೆ ಸುನಿತಾ ಪೂಜಾರಿ, ಅರ್ಚಕ ಸುಧೀಂದ್ರ ಭಟ್, ಸುಜ್ಞೇಂದ್ರ ಭಟ್ ಹಾಜರಿದ್ದರು.
ಇದೇ ಸಂದರ್ಭದಲ್ಲಿ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ದೇಗುಲ ದ್ವಾರಕ್ಕೆ ಹಿತ್ತಾಳೆ ಹೊದಿಕೆ ಸಮರ್ಪಿಸಿದ ರಮಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ರಂಗಿಣಿ ಉಪೇಂದ್ರ ರಾವ್ ಪ್ರಾರ್ಥಿಸಿದರು. ಕಾವ್ಯಶ್ರೀ ಅಜೇರು ಮತ್ತು ಲಕ್ಷ್ಮಿ ನಾರಾಯಣ ಹೊಳ್ಳ ದ್ವಂದ್ವ ಭಾಗವತಿಕೆಯಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ ತಾಳಮದ್ದಲೆ ನಡೆಯಿತು. ರಂಜಿನಿ ಲಕ್ಷ್ಮಿನಾರಾಯಣ ಅವರು ‘ದಾಕ್ಷಾಯಿಣಿ’ ಏಕಪಾತ್ರಾಭಿನಯ ಪ್ರದರ್ಶಿಸಿದರು. ನಮ್ಮ ಬೆದ್ರ ಕಲಾವಿದರಿಂದ ‘ವೈರಲ್ ವೈಶಾಲಿ’ ತುಳುನಾಟಕ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.