ADVERTISEMENT

ಉಡುಪಿ | ‘ವಿಶ್ವ ಮಾನವ ಪರಿಕಲ್ಪನೆ ಅಳವಡಿಸಿಕೊಳ್ಳಿ’

ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:45 IST
Last Updated 30 ಡಿಸೆಂಬರ್ 2025, 7:45 IST
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಕಾರ್ಯಕ್ರಮ ಉದ್ಘಾಟಿಸಿದರು
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಕಾರ್ಯಕ್ರಮ ಉದ್ಘಾಟಿಸಿದರು   

ಉಡುಪಿ: ರಾಷ್ಟ್ರಕವಿ ಕುವೆಂಪು ಅವರು ಎಲ್ಲಾ ಧರ್ಮಗಳು ಒಂದೇ, ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಜೀವನ ನಡೆಸಬೇಕು ಎಂಬ ಆಶಯದೊಂದಿಗೆ ಜಗತ್ತಿಗೆ ಸಾರಿದ ವಿಶ್ವ ಮಾನವ ಸಂದೇಶದ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದು ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ (ಬೋರ್ಡ್ ಹೈಸ್ಕೂಲ್) ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ಮನುಜ– ಮನುಜರಲ್ಲಿ ಸಹೋದರತೆ ಮೂಡಬೇಕು. ಜಾತಿ, ಮತ, ಧರ್ಮ, ಪಂಥಕ್ಕೆ ಆದ್ಯತೆ ನೀಡದೆ ಮಾನವೀಯ ಧರ್ಮ ಮೇಲು ಎಂಬ ಭಾವನೆಯೊಂದಿಗೆ ಕುವೆಂಪು ನೀಡಿದ ವಿಶ್ವ ಮಾನವ ಸಂದೇಶ ಮನುಕುಲಕ್ಕೆ ಮಾದರಿಯಾಗುವಂಥದ್ದು ಎಂದರು.

ಮಹನೀಯರನ್ನು ಗೌರವಿಸಿ, ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಷ್ಣುಮೂರ್ತಿ ಪ್ರಭು ಉಪನ್ಯಾಸ ನೀಡಿ , ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಹಲವು ನಾಟಕಗಳು, ಸಾಹಿತ್ಯಗಳನ್ನು ರಚಿಸಿದ್ದರು ಎಂದರು.

ADVERTISEMENT

ಸತ್ವಯುತವಾದ ಸಾಹಿತ್ಯವನ್ನು ರಚಿಸುವುದರೊಂದಿಗೆ ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ಎಲ್ಲರೂ ಮಾನವರೇ, ಮಾನವೀಯತೆಯೇ ದೊಡ್ಡ ಧರ್ಮ ಎಂಬ ಸಂದೇಶವನ್ನು ಕುವೆಂಪು ಸಾರಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಮಾನವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿಯೊಬ್ಬರಲ್ಲೂ ಸಮಾನತೆ, ಒಳ್ಳೆಯದನ್ನು ಬಯಸುವ ಗುಣವಿದ್ದಾಗ ಮಾನವ ಕಲ್ಪನೆ ಮೂಡುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ, ಪ್ರಾಂಶುಪಾಲೆ ಲೀಲಾಭಟ್ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಸಿಬ್ಬಂದಿ ವರ್ಷಾ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಶಿಕ್ಷಕಿ ಭಾಗೀರಥಿ ವಂದಿಸಿದರು.

ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ   ಕುವೆಂಪು ಆದರ್ಶ ಅಳವಡಿಸಿಕೊಳ್ಳಲು ಕರೆ

ಯುವಪೀಳಿಗೆ ಕುವೆಂಪು ಅವರ ಕೃತಿಗಳನ್ನು ಅಧ್ಯಯನ ಮಾಡುವುದರೊಂದಿಗೆ ಅವರ ಕಾವ್ಯಗಳಲ್ಲಿನ ಮಾನವೀಯ ಮೌಲ್ಯಗಳನ್ನು ಪಾಲಿಸಬೇಕು
ಎಂ.ಎ. ಗಫೂರ್ ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.