ADVERTISEMENT

ಪಟ್ಟದ ದೇವರ ಹಸ್ತಾಂತರ ವಿಚಾರ: ಅಷ್ಟಮಠದ ಸ್ವಾಮೀಜಿಗಳ ಸಭೆ ನಂತರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:24 IST
Last Updated 3 ಜುಲೈ 2018, 16:24 IST
ಶೀರೂರು ಮಠದ   ಲಕ್ಷ್ಮೀವರ ತೀರ್ಥ ಶ್ರೀ
ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀ   

ಉಡುಪಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳಿಗೆ ಪಟ್ಟದ ದೇವರನ್ನು ಹಸ್ತಾಂತರಿಸುವ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ಅಷ್ಟಮಠದ ಸ್ವಾಮೀಜಿಗಳು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಶಿಷ್ಯಸ್ವೀಕಾರ ಮಾಡಿಕೊಳ್ಳದ ಹೊರತು ಶೀರೂರು ಶ್ರೀಗಳಿಗೆ ಪಟ್ಟದ ದೇವರನ್ನು ಹಸ್ತಾಂತರ ಮಾಡುವುದಿಲ್ಲ ಎಂದು ಮಠಾಧೀಶರು ಪಟ್ಟುಹಿಡಿದಿರುವ ವಿಚಾರ ನಿಜವೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಭಾನುವಾರ ಕೆಲವು ಮಠಾಧೀಶರನ್ನೊಳಗೊಂಡ ಸಭೆ ನಡೆದಿದೆ. ಶೀಘ್ರವೇ ಏಳು ಮಠಾಧೀಶರು ಮತ್ತೊಂದು ಸಭೆ ಸೇರಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.‌

‘ಪಟ್ಟದ ದೇವರಿಗೆ ಪ್ರತಿನಿತ್ಯ ಪೂಜೆ ನಡೆಯಲೇಬೇಕು. ಮಠಾಧೀಶರು ಪ್ರವಾಸ ಮಾಡುವ ಸಂದರ್ಭ ಮೂಲಮಠದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲು ಪರ್ಯಾಯ ವ್ಯವಸ್ಥೆ ಇಲ್ಲದಿದ್ದರೆ ಕೃಷ್ಣಮಠಕ್ಕೆ ತಂದು ಒಪ್ಪಿಸಲಾಗುತ್ತದೆ. ಬಳಿಕ ಮರಳಿ ಕೊಂಡೊಯ್ಯಲಾಗುತ್ತದೆ. ಶೀರೂರು ಶ್ರೀಗಳು ಕೂಡ ಕೃಷ್ಣಮಠಕ್ಕೆ ಪಟ್ಟದ ದೇವರನ್ನು ನೀಡಿದ್ದು, ಇಲ್ಲಿಯೇ ನಿತ್ಯ ಪೂಜೆ ನಡೆಯುತ್ತಿದೆ. ಇದರಲ್ಲಿ ವಿವಾದ ಇಲ್ಲ’ ಎಂದು ಸಮಜಾಯಿಷಿ ನೀಡಿದರು.

ADVERTISEMENT

‘ಹಿಂದೆ, ರಾಮನವಮಿ ಸಂದರ್ಭ ಶೀರೂರು ಶ್ರೀಗಳು ಪಟ್ಟದ ದೇವರನ್ನು ಕೊಂಡೊಯ್ದಿದ್ದರು. ಬಳಿಕ ಕೃಷ್ಣಮಠಕ್ಕೆ ತಂದು ಒಪ್ಪಿಸಿದ್ದರು. ಇದರಲ್ಲಿ ಯಾವ ಗೊಂದಲಗಳು ಇಲ್ಲ’ ಎಂದು ಪಲಿಮಾರು ಶ್ರೀಗಳು ಪ್ರತಿಕ್ರಿಯೆ ನೀಡಿದರು.

ಏನಿದು ವಿವಾದ?

ಅಷ್ಟಮಠಗಳ ಯತಿಗಳು ಪ್ರತ್ಯೇಕವಾಗಿ ಪಟ್ಟದ ದೇವರನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದರಂತೆ, ಶೀರೂರು ಮಠಕ್ಕೆ ‘ಶ್ರೀಅನ್ನವಿಠ್ಠಲ’ ಪಟ್ಟದ ದೇವರು. ಲಕ್ಷ್ಮೀವರ ತೀರ್ಥರಿಗೆ ಈಚೆಗೆ ಅನಾರೋಗ್ಯ ಕಾಡಿದ್ದರಿಂದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದ ಕಾರಣ ಕೃಷ್ಣಮಠಕ್ಕೆ ಒಪ್ಪಿಸಿದ್ದರು. ಚೇತರಿಸಿಕೊಂಡ ಬಳಿಕ ಮರಳಿ ಪಟ್ಟದ ದೇವರನ್ನು ಪಡೆಯಲು ಹೋದಾಗ, ಮಠದ ಸಂಪ್ರದಾಯಗಳಿಗೆ ಬದ್ಧವಾಗಿ ಶಿಷ್ಯಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಹಿಂದಿರುಸಲು ಸಾಧ್ಯವಿಲ್ಲ ಎಂದು ಕೆಲವು ಮಠಾಧೀಶರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶೀರೂರು ಶ್ರೀಗಳು ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಕೊನೆಯ ಘಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈಚೆಗೆ, ಅಷ್ಟಮಠಾಧೀಶರಿಗೆ ಮಕ್ಕಳಿದ್ದಾರೆ ಎಂದು ಶೀರೂರು ಶ್ರೀಗಳು ಹೇಳಿದ್ದಾರೆ ಎನ್ನಲಾದ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ಬಗ್ಗೆ ಶೀರೂರು ಶ್ರೀಗಳ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ ಅವರ ಮೊಬೈಲ್‌ ಸ್ವಿಚ್ ಆಫ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.