ADVERTISEMENT

ಜೀವನದ ನೆನಪುಗಳು ಯಶಸ್ಸಿನ ಮೈಲುಗಲ್ಲಾಗಲಿ: ಶಾಸಕ ಗುರುರಾಜ್ ಗಂಟಿಹೊಳೆ

‘ಕೊಡ್ಗಿ ನೆನಪು 4’ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗುರುರಾಜ್ ಗಂಟಿಹೊಳೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 7:42 IST
Last Updated 7 ಅಕ್ಟೋಬರ್ 2025, 7:42 IST
ಅಮವಾಸೆ ಬೈಲು ಚಾರಿಟಬಲ್ ಟ್ರಸ್ಟ್ ವತಿಯಿಂದ ಬ್ರಹ್ಮಾವರದ ಕೋಟತಟ್ಟು ಗ್ರಾಮ ಪಂಚಾಯಿತಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ, ನಗದು ಬಹುಮಾನ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಪಿಡಿಒ ರವೀಂದ್ರ ರಾವ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಅಮವಾಸೆ ಬೈಲು ಚಾರಿಟಬಲ್ ಟ್ರಸ್ಟ್ ವತಿಯಿಂದ ಬ್ರಹ್ಮಾವರದ ಕೋಟತಟ್ಟು ಗ್ರಾಮ ಪಂಚಾಯಿತಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ, ನಗದು ಬಹುಮಾನ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಪಿಡಿಒ ರವೀಂದ್ರ ರಾವ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕುಂದಾಪುರ: ‘ಜೀವನದಲ್ಲಿ ಬಂದು ಹೋಗುವ ಅನೇಕ ಘಟನೆಗಳ ಹಿಂದೆ ಇರುವ ವಿಸ್ತಾರ ನೆನಪುಗಳು ನಮ್ಮ ಯಶಸ್ಸಿನ ಮೈಲುಗಲ್ಲಾಗಬೇಕು’ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಅಮಾಸೆಬೈಲು ಚಾರಿಟಬಲ್ ಟ್ರಸ್ಟ್, ಕರ್ಣಾಟಕ ಬ್ಯಾಂಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ, ಕೊಡ್ಗಿ ಅಭಿಮಾನಿ ಬಳಗದ ಸಹಯೋಗದಲ್ಲಿ‌ ಭಾನುವಾರ ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ‘ಕೊಡ್ಗಿ ನೆನಪು 4’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವ ಆಧಾರಿತ ಜ್ಞಾನಕ್ಕೆ ಪ್ರಾಯೋಗಿಕತೆಯ ಸ್ಪರ್ಶ ಇರಬೇಕು ಎನ್ನುವ ಚಿಂತನೆಗಳನ್ನು ಹೊಂದಿದ್ದ ಎ.ಜಿ.ಕೊಡ್ಗಿ ಅವರು ಸಮಾಜದ ಮಾರ್ಗದರ್ಶಕರಾಗಿದ್ದರು. ಅವರ ಬದುಕಿನ ಆದರ್ಶಗಳು ನಿತ್ಯ ಬೆಳಕಾಗಿದೆ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಲ್ಲಾ ಕ್ಷೇತ್ರಗಳಲ್ಲೂ ಅಗಾಧ ಜ್ಞಾನ, ಅನುಭವ ಹೊಂದಿದ್ದ ಎ.ಜಿ.ಕೊಡ್ಗಿ ಅವರು ಗ್ರಾಮೀಣ ಅಭಿವೃದ್ಧಿ ಬಗ್ಗೆ ವಿಶೇಷ ಚಿಂತನೆ ಹೊಂದಿದ್ದರು. ಚಿಂತನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ತಮ್ಮದೇ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದ ಅವರು, ನೇರ ನಡೆ–ನುಡಿ ಹೊಂದಿದ್ದರು ಎಂದರು.

ಕರ್ಣಾ‌ಟಕ ಬ್ಯಾಂಕ್‌ ಹಿರಿಯ ಅಧಿಕಾರಿ ವಾದಿರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್, ಅಮಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಅಮಾಸೆಬೈಲು ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಶಶಿಧರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಕೇಶ್ ಭಂಡಾರಿ, ಕೋಟೇಶ್ವರ ಗೀತಾ ಎಚ್‌ಎಸ್‌ಎನ್ ಫೌಂಡೇಷನ್ ಅಧ್ಯಕ್ಷ ಶಂಕರ್ ಐತಾಳ್, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ. ಭಾಗವಹಿಸಿದ್ದರು.

ಬ್ರಹ್ಮಾವರದ ಕೋಟತಟ್ಟು ಗ್ರಾಮ ಪಂಚಾಯಿತಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ, ನಗದು ಬಹುಮಾನವನ್ನು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅವರಿಗೆ ನೀಡಿ ಗೌರವಿಸಲಾಯಿತು. ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಸ್‌ ನಿರ್ವಹಣೆಗೆ  ಅಮಾಸೆಬೈಲು ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾದ ಚೆಕ್‌ ಅನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ವಿತರಿಸಿದರು. ಕೋಟೇಶ್ವರದ ಹರ್ಷಾ, ಕಾವ್ಯಾ‌ ದಂಪತಿ ಗಾನನಮನ, ಕುಂಚ ನಮನ ಸಲ್ಲಿಸಿದರು. ಅಮಾಸೆಬೈಲು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಶ್ರೀಕಾಂತ್ ಸಿದ್ದಾಪುರ ನಿರೂಪಿಸಿದರು. ಶೇಖರ ಯು. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.