ADVERTISEMENT

ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭವಾಗಲಿ

ಡಿ.12ರಂದು ಕಾರ್ಯಕರ್ತೆಯರಿಂದ ಬೆಂಗಳೂರಿಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:41 IST
Last Updated 5 ಡಿಸೆಂಬರ್ 2019, 9:41 IST
ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಎದುರು ಬುಧವಾರ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಯುಮುನಾ ಗಾಂವ್ಕರ್‌ ಮಾತನಾಡಿದರು.
ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಎದುರು ಬುಧವಾರ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಯುಮುನಾ ಗಾಂವ್ಕರ್‌ ಮಾತನಾಡಿದರು.   

ಉಡುಪಿ: ಬಡ ಮಕ್ಕಳಿಗೆ ಆಹಾರ, ಆರೋಗ್ಯ ಹಾಗೂ ಶಿಕ್ಷಣವನ್ನು ನೀಡುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ಸರ್ಕಾರಗಳು ಷಡ್ಯಂತ್ರ ರೂಪಿಸಿವೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಯುಮುನಾ ಗಾಂವ್ಕರ್ ಆರೋಪಿಸಿದರು.

ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಎದುರು ಬುಧವಾರ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದು ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುತ್ತಿದೆ. ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ಬೀದಿಗೆ ತಳ್ಳಲು ಯತ್ನಿಸುತ್ತಿದೆ. ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದ್ದು, ಪೋಷಕರ ಸಹಿ ಸಂಗ್ರಹ, ಜಾಥಾಗಳು ನಡೆದಿವೆ.

ADVERTISEMENT

ಡಿ.10ರಂದು ಸಾವಿರಾರು ಕಾರ್ಯಕರ್ತೆಯರು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲಿದ್ದಾರೆ. ಪ್ರತಿಯೊಂದು ಜಿಲ್ಲೆಯಿಂದಲೂ ಕಾರ್ಯಕರ್ತೆಯರು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ಭೋಧಿಸುವಷ್ಟು ಸಾಮರ್ಥ್ಯ ಇದೆ. 8 ತಾಸು ಕೆಲಸ ಮಾಡಲೂ ಸಿದ್ಧರಿದ್ದಾರೆ. ಸರ್ಕಾರ ಇದನ್ನು ಅರಿತು ಅಂಗನವಾಡಿಗಳನ್ನು ಪಾಲನಾ ಹಾಗೂ ಕಲಿಕಾ ಕೇಂದ್ರಗಳನ್ನಾಗಿಸಬೇಕು ಎಂದು ಯಮುನಾ ಗಾಂವ್ಕರ್ ಒತ್ತಾಯಿಸಿದರು.

ಅನುದಾನ ಕಡಿತ:ಐಸಿಡಿಎಸ್‌ ಯೋಜನೆಗೆ ಹಿಂದೆ ಕೇಂದ್ರ ಸರ್ಕಾರದ ಶೇ 90 ಪಾಲು, ರಾಜ್ಯ ಸರ್ಕಾರದ ಶೇ 10 ಪಾಲು ಅನುದಾನ ದೊರೆಯುತ್ತಿತ್ತು. ಬಳಿಕ ಕೇಂದ್ರದ ಅನುದಾನ ಪ್ರಮಾಣ ಶೇ 60ಕ್ಕೆ ಕಡಿತವಾಯಿತು. ಈಚೆಗೆ ಶೇ 25ಕ್ಕೆ ಕಡಿತವಾಗಿದೆ. ಈಗಅಂಗನವಾಡಿ ಕೇಂದದ್ರಗಳನ್ನು ಗರ್ಭಿಣಿ, ಬಾಣಂತಿಯರ ತಪಾಸಣಾ ಕೇಂದ್ರಗಳನ್ನಾಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಯೋಜೆನಗಳನ್ನು ಹಂತಹಂತವಾಗಿ ಕಡಿತಗೊಳಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳೇ ವಹಿಸಿಕೊಳ್ಳಬೇಕು ಎಂಬ ಆದೇಶ ಹೊರಬೀಳುತ್ತಿದ್ದು, ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೇಂದ್ರದಿಂದ ಅನುದಾನ ಕಡಿತಗೊಂಡ ಪರಿಣಾಮ ಕಿಶೋರಿಯರಿಗೆ ಸಿಗುತ್ತಿದ್ದ ಆಹಾರ ಸರಬರಾಜು ನಿಂತುಹೋಯಿತು. ತರಬೇತಿ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಈಗ ಅಂಗನವಾಡಿಗಳನ್ನು ಖಾಸಗೀಕರಣಗೊಳಿಸಿ ಉದ್ಯಮಿಗಳಿಗೆ ನೀಡುವ ಕುತಂತ್ರ ನಡೆಯುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಾರತಿ, ಖಜಾಂಚಿ ಯಶೋಧಾ, ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.