ADVERTISEMENT

ಜೇಸಿಸ್‌ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ: ‘ಮಾತೃಭಾಷೆ ಹೃದಯದ ಭಾಷೆ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 4:39 IST
Last Updated 8 ಜೂನ್ 2025, 4:39 IST
ಕಾರ್ಕಳ ಜೇಸಿಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಚಾಲನೆ ನೀಡಲಾಯಿತು
ಕಾರ್ಕಳ ಜೇಸಿಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಚಾಲನೆ ನೀಡಲಾಯಿತು   

ಕಾರ್ಕಳ: ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ, ತುಳು ಭಾಷೆ ಮಾತನಾಡುವುದೇ ಅಪರಾಧ ಎಂಬಂತಹ ಸನ್ನಿವೇಶ ಸರಿಯಲ್ಲ ಎಂದು ವಿದ್ವಾನ್‌ ದಾಮೋದರ ಶರ್ಮಾ ಹೇಳಿದರು.

ಇಲ್ಲಿನ ಜೇಸಿಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಂಗ್ಲಿಷ್ ವ್ಯಾವಹಾರಿಕ ಭಾಷೆಯಾದರೆ ತುಳು, ಕನ್ನಡ, ಸಂಸ್ಕೃತ ನಮ್ಮ ಹೃದಯದ ಭಾಷೆ. ‘ಮಾತೃದೇವೋಭವ’ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿ ಹೆತ್ತವರನ್ನು ಗೌರವ, ಭಕ್ತಿಯಿಂದ ಕಾಣಬೇಕು. ಭಗವದ್ಗೀತೆ, ರಾಮಾಯಣ, ಮಹಾಭಾರತವು ಸಂಸ್ಕಾರ ಕಲಿಸಿ, ಜೀವನದ ದಾರಿ ತೋರುತ್ತದೆ. ಅಂತಹ ಗ್ರಂಥಗಳು ಪ್ರತಿ ಮನೆಯಲ್ಲಿರಬೇಕು. ಜೇಸಿಸ್‌ ಶಾಲೆಯು ಮಾತೃಭಾಷೆ, ದೇವ ಭಾಷೆ ಎರಡಕ್ಕೂ ಒತ್ತು ನೀಡುತ್ತಿರುವುದು ‍ಶ್ಲಾಘನೀಯ ಎಂದರು.

ಸಂಸ್ಕೃತ ಶಿಕ್ಷಕ ಶಂಕರ್‌ ನಾರಾಯಣ ಭಟ್‌, ಅಕ್ಷರಾಭ್ಯಾಸ ಕಾರ್ಯಕ್ರಮ ನೆರವೇರಿಸಿದರು.

ADVERTISEMENT

ಜೇಸಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಜೈನ್‌, ಮುಖ್ಯ ಶಿಕ್ಷಕಿ ಸುರೇಖಾ ರಾಜ್‌, ಕಾರ್ಯಕ್ರಮ ಸಂಯೋಜಕಿ ವಂದನಾ ರೈ ಉಪಸ್ಥಿತರಿದ್ದರು.

ಶ್ಯಾಮಲಾ ಭಟ್‌, ಸಂಗೀತಾ, ದಿವ್ಯಾ ಶಂಕರ್‌ ವೀಣಾ ಗಾಯನದಲ್ಲಿ ಸಹಕರಿಸಿದರು. ದೀಕ್ಷಿತಾ ನಿರೂಪಿಸಿದರು. ಸುಕನ್ಯಾ ವಂದಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.