ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಶೇ 70.5 ಮತದಾನ

ಉಡುಪಿಯಲ್ಲಿ ಶಾಂತಿಯುತವಾಗಿ ನಡೆದ ಮತದಾನ: ಸಾಲಿಗ್ರಾಮದಲ್ಲಿ ಮತ ಪ್ರಮಾಣ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 16:07 IST
Last Updated 31 ಆಗಸ್ಟ್ 2018, 16:07 IST
ಉಡುಪಿ ನಗರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಸಾಲುಗಟ್ಟಿ ನಿಂತಿರುವ ಮತದಾರರು
ಉಡುಪಿ ನಗರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಸಾಲುಗಟ್ಟಿ ನಿಂತಿರುವ ಮತದಾರರು   

ಉಡುಪಿ: ಜಿಲ್ಲೆಯಾದ್ಯಂತ ಸ್ಥಳೀಯಸಂಸ್ಥೆಗಳಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ 70.5ರಷ್ಟು ಮತದಾನವಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಶೇ 68, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಶೇ 75, ಕುಂದಾಪುರ ಪುರಸಭೆಗೆ ಶೇ 68, ಕಾರ್ಕಳ ಪುರಸಭೆಗೆ ಶೇ 71 ಮತದಾನವಾಗಿದೆ.

ಬೆಳಿಗ್ಗೆ 7ರಿಂದಲೇ ಮತದಾನ ಪ್ರಕ್ರಿಯೆ ಆರಂಭವಾಯಿತು. ಉತ್ಸಾಹದಿಂದ ಮತಕೇಂದ್ರಗಳಿಗೆ ಬಂದ ಮತದಾರರು ಮತ ಹಾಕಿದರು. ಮೊದಲ ಸಲ ಮತದಾನ ಮಾಡಿದ ಯುವಕ–ಯುವತಿಯರು ಬೆರಳಿಗೆ ಹಾಕಿದ್ದ ಶಾಯಿಯನ್ನು ಪ್ರದರ್ಶಿಸಿ ಹೆಮ್ಮೆಪಟ್ಟರು.

ADVERTISEMENT

ಬೆಳಿಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ 14.25 ಮತದಾನವಾಗಿತ್ತು. 11 ಗಂಟೆಯ ಹೊತ್ತಿಗೆ ಶೇ 31.14, ಮಧ್ಯಾಹ್ನ 1 ಗಂಟೆಯಷ್ಟರಲ್ಲಿ ಶೇ 45.40, 3 ಗಂಟೆಯ ವೇಳೆಗೆ ಶೇ 56.43 ಹಾಗೂ ಅಂತಿಮವಾಗಿ ಸಂಜೆ 5 ಗಂಟೆಗೆ ಶೇ 70.5ರಷ್ಟು ಮತದಾನ ನಡೆಯಿತು.

ವೃದ್ದರು, ಅಂಗವಿಕಲರು, ಅನಾರೋಗ್ಯ ಪೀಡಿತರು ಸಹಾಯಕರ ನೆರವಿನಿಂದ ಮತಗಟ್ಟೆಗೆ ಬಂದು ವೋಟ್‌ ಮಾಡಿದ್ದು ವಿಶೇಷವಾಗಿತ್ತು. ಕುಂದಾಪುರದ ಸರ್ಕಾರಿ ಆಸ್ಪತ್ರೆ ವಾರ್ಡ್‌ ವ್ಯಾಪ್ತಿಯ ಬಂಟ್ವಾಳ ರಘುನಾಥ ರಾವ್ ಶಾಲೆಯ ಮತಗಟ್ಟೆಗೆ ವಾಕರ್‌ ನೆರವಿನಿಂದ ಬಂದ ವೃದ್ಧರಾದ ಸಿದು ಮೊಗೇರ್ತಿ ಎಲ್ಲರ ಗಮನ ಸೆಳೆದರು.

ಸಾಲಿಗ್ರಾಮದ ಯಕ್ಷಮಠ ವಾರ್ಡ್‌ನ ಗುಂಡ್ಮಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದ ಅಂಗವಿಕಲರಾದ ವಾಸು ಮತ ಚಲಾಯಿಸಿ ಮಾದರಿಯಾದರು.

ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ: ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 261 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ಅಭ್ಯರ್ಥಿಗಳ ಭವಿಷ್ಯವನ್ನು ಶುಕ್ರವಾರ ಮತದಾರರು ಮತಯಂತ್ರವನ್ನು ಸೇರಿಸಿದ್ದಾರೆ.

ಉಡುಪಿ ನಗರಸಭೆಯ 35 ವಾರ್ಡ್‌ನಿಂದ 91 ಅಭ್ಯರ್ಥಿಗಳು, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಿಂದ 46 ಅಭ್ಯರ್ಥಿಗಳು, ಕುಂದಾಪುರ ಪುರಸಭೆಯ 23 ವಾರ್ಡ್‌ನಿಂದ 68 ಮಂದಿ ಹಾಗೂ ಕಾರ್ಕಳ ಪುರಸಭೆಯ 23 ವಾರ್ಡ್‌ನಿಂದ 56 ಮಂದಿ ಸೇರಿದಂತೆ ಒಟ್ಟು 261 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ಉಡುಪಿ ನಗರಸಭೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತಲಾ 35 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಜೆಡಿಎಸ್‌ನಿಂದ 10, ಶಿವಸೇನೆಯಿಂದ ಒಬ್ಬರು ಹಾಗೂ 9 ಪಕ್ಷೇತರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತಲಾ 16 ಅಭ್ಯರ್ಥಿಗಳು, ಜೆ.ಡಿ.ಎಸ್‌ನಿಂದ 6, 7 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕುಂದಾಪುರ ಪುರಸಭೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತಲಾ 23, ಜೆಡಿಎಸ್‌ 3 ಹಾಗೂ ಪಕ್ಷೇತರ 10 ಹಾಗೂ ಕಾರ್ಕಳದ ಪುರಸಭೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತಲಾ 23, ಜೆಡಿಎಸ್‌ನಿಂದ 3, ಪಕ್ಷೇತರ 7 ಅಭ್ಯರ್ಥಿಗಳಸ್ಪರ್ಧಿಸಿದ್ದು, ಎಲ್ಲರ ಭವಿಷ್ಯ ಸೆಪ್ಟೆಂಬರ್ 3ರಂದು ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.