ADVERTISEMENT

ಒಂದೇ ದಿನ 20,444 ಪ್ರಕರಣ ಇತ್ಯರ್ಥ

ರಾಷ್ಟ್ರೀಯ ಲೋಕ್ ಅದಾಲತ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 14:03 IST
Last Updated 14 ಆಗಸ್ಟ್ 2022, 14:03 IST
ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್‌ ನಡೆಯಿತು.
ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್‌ ನಡೆಯಿತು.   

ಉಡುಪಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 20,444 ಪ್ರಕರಣಗಳು ಇತ್ಯರ್ಥವಾಗಿವೆ.

ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು 34, ಚೆಕ್‌ ಅಮಾನ್ಯ ಪ್ರಕರಣ 226, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ 24, ಎಂವಿಸಿ ಪ್ರಕರಣ 90, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ 1, ಎಂಎಂಆರ್‌ಡಿ ಕಾಯ್ದೆಯ ಪ್ರಕರಣ 12, ವೈವಾಹಿಕ ಪ್ರಕರಣ 2, ಭೂಸ್ವಾಧೀನ ಪ್ರಕರಣ 1, ಸಿವಿಲ್ ಪ್ರಕರಣಗಳು 115, ಇತರೆ ಕ್ರಿಮಿನಲ್ ಪ್ರಕರಣ 1,501 ಹಾಗೂ ವ್ಯಾಜ್ಯ ಪೂರ್ವ ದಾವೆ 18,438 ಪ್ರಕರಣಗಳು ರಾಜೀ ಮುಖಾಂತರ ಇತ್ಯರ್ಥಗೊಂಡಿವೆ. ₹ 11,11,51,425 ಪರಿಹಾರ ಮೊತ್ತವನ್ನು ಘೋಷಿಸಲಾಗಿದೆ.

ಒಂದಾದ 13 ವರ್ಷ ದೂರವಾಗಿದ್ದ ದಂಪತಿ: 13 ವರ್ಷಗಳಿಂದ ಬೇರೆಯಾಗಿದ್ದ ದಂಪತಿಗಳು ಮಗಳ ಭವಿಷ್ಯದ ದೃಷ್ಟಿಯಿಂದ ನ್ಯಾಯಾಧೀಶರು ಹಾಗೂ ವಕೀಲರ ಮಧ್ಯಸ್ಥಿಕೆಯಲ್ಲಿ ಮನಸ್ತಾಪ ದೂರಮಾಡಿ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು.

ADVERTISEMENT

ಒಂದಾದ ಅಣ್ಣ ತಮ್ಮಂದಿರು: 16 ವರ್ಷ ಹಳೆಯದಾದ ಅಣ್ಣ ತಮ್ಮಂದಿರ ನಡುವಿನ ವ್ಯಾಜ್ಯವೂ ಬಗೆಹರಿದಿದ್ದು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.

ಸಂಬಂಧಿಕರ ನಡುವೆ 35 ವರ್ಷಗಳ ಹಿಂದಿನಿಂದ ಇದ್ದ ವೈಷಮ್ಯವೂ ಅದಾಲತ್‌ನಲ್ಲಿ ಬಗೆಹರಿದಿದ್ದು ವಿಶೇಷ. 2017ರಲ್ಲಿ ಪಾಲು ವಿಭಾಗದ ದಾವೆ ಹೂಡಲಾಗಿದ್ದ ಪ್ರಕರಣದಲ್ಲಿ ಉಭಯ ಪಕ್ಷಗಾರರ ವಿಚಾರಣೆ ನಡೆದು ತೀರ್ಪನ್ನು ಆ.19ಕ್ಕೆ ಕಾಯ್ದಿರಿಸಲಾಗಿತ್ತು. ಈ ಪ್ರಕರಣದಲ್ಲಿ 25 ಮಂದಿ ಪಕ್ಷಗಾರರಿದ್ದು ಎಲ್ಲರೂ ಪಾಲು ವಿಭಾಗ ಮಾಡಿಕೊಂಡು ತಮ್ಮ ಭಾಗಕ್ಕೆ ಬಂದ ಪಾಲಿನಲ್ಲಿ ದಾರಿಗೆ ಸಮನಾಗಿ ಜಾಗ ಬಿಟ್ಟುಕೊಡಲು ಒಪ್ಪಿ ಸೌಹಾರ್ದಯುತವಾಗಿ ಸಂಧಾನ ಮಾಡಿಕೊಂಡರು.

ಒಂದಾದ ಜೋಡಿಗಳು: ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಎರಡು ವೈವಾಹಿಕ ಪ್ರಕರಣದಲ್ಲಿ ದಂಪತಿಗಳು ವೈಮನಸ್ಸನ್ನು ಮರೆತು ಒಂದಾದರು.

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಕೀಲರ ಸಂಘ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್ ಪ್ರತಿನಿಧಿಗಳು, ಕಕ್ಷಿಗಾರರು ಅದಾಲತ್‌ನಲ್ಲಿದ್ದು ಯಶಸ್ವಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.