ADVERTISEMENT

ಸುವರ್ಣ ತ್ರಿಭುಜ ಬೋಟ್‌ ದುರಂತ: ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಮಧ್ವರಾಜ್‌

ದುರಂತದ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮೇ 2019, 15:24 IST
Last Updated 7 ಮೇ 2019, 15:24 IST
ಪ್ರಮೋದ್ ಮಧ್ವರಾಜ್
ಪ್ರಮೋದ್ ಮಧ್ವರಾಜ್   

ಉಡುಪಿ: ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಭುಜ ಬೋಟ್‌ ದುರಂತ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಮಹಾರಾಷ್ಟ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಮಲ್ಪೆಯಿಂದ 7 ಮೀನುಗಾರರನ್ನು ಹೊತ್ತು ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಡಿ.15ರಂದು ಮಹರಾಷ್ಟ್ರದ ಸಮುದ್ರದಲ್ಲಿ ನಾಪತ್ತೆಯಾಗಿತ್ತು. ಡಿ. 15, 16ರಂದು ಅದೇ ಜಾಗದಲ್ಲಿ ನೌಕಾಪಡೆಯ ಐಎನ್‌ಎಸ್‌ ಕೊಚ್ಚಿನ್ ಹಡಗಿನ ತಳಭಾಗಕ್ಕೆ ಹಾನಿಯಾಗಿತ್ತು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಶಾಸಕರು ನಾಪತ್ತೆಯಾದ ಮೀನುಗಾರರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಹಲವು ತಿಂಗಳುಗಳಿಂದ ಹೇಳಿಕೆ ನೀಡುತ್ತಲೇ ಬಂದಿದ್ದರು. ಇದರ ಮಧ್ಯೆ ಮೇ 1ಕ್ಕೆ ಮಹಾರಾಷ್ಟ್ರದ ಮಾಲ್ವಾನ್ ಸಮುದ್ರ ತೀರದಲ್ಲಿ ಸುವರ್ಣ ತ್ರಿಭುಜ ಬೋಟ್‌ ಅವಶೇಷಗಳು ಪತ್ತೆಯಾಗಿದೆ ಎಂದು ನೌಕಾಪಡೆ ಸ್ಪಷ್ಟಪಡಿಸಿದೆ.

ADVERTISEMENT

ಈ ಪ್ರಕರಣ ಮೇಲ್ನೋಟಕ್ಕೆ ಅನುಮಾನ ಹುಟ್ಟುಹಾಕಿದ್ದು, ಲೋಕಸಭಾ ಚುನಾವಣೆ ದೃಷ್ಟಿಯಿಂದ ಬೋಟ್ ದುರಂತ ಪ್ರಕರಣವನ್ನು ಮುಚ್ಚಿಟ್ಟಿರುವಂತೆ ಕಾಣುತ್ತಿದೆ. ಸುವರ್ಣ ತ್ರಿಭುಜ ಬೋಟ್‌ಗೆ ಐಎನ್‌ಎಸ್‌ ಕೊಚ್ಚಿನ್ ಹಡುಗು ಡಿಕ್ಕಿಹೊಡೆದಿದೆಯಾ ಅಥವಾ ಬೇರೆ ಹಡಗು ಡಿಕ್ಕಿಹೊಡೆದಿದೆಯಾ ಎಂಬ ಕುರಿತು ತನಿಖೆ ನಡೆಯಬೇಕು. ಬೋಟ್‌ ದುರಂತಕ್ಕೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಪ್ರಮೋದ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಐಎನ್‌ಎಸ್‌ ಕೊಚ್ಚಿನ್‌ ಹಡಗಿನಿಂದಲೇ ಅವಘಡ ಸಂಭವಿಸಿದ್ದರೆ ಬೋಟ್‌ನ ವೆಚ್ಚವನ್ನು ಭರಿಸಬೇಕು. ಜತೆಗೆ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು. ನನ್ನ ಮನವಿಯನ್ನು ಪರಿಗಣಿಸದಿದ್ದರೆ ಸೂಕ್ತ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.