ADVERTISEMENT

ಜಿಲ್ ಬೈಡೆನ್‌ ನೀತಿ ನಿರ್ದೇಶಕಿ ಮಾಲಾ ಕುಂದಾಪುರದ ಕುಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 21:20 IST
Last Updated 21 ನವೆಂಬರ್ 2020, 21:20 IST
ಮಾಲಾ ಅಡಿಗ
ಮಾಲಾ ಅಡಿಗ   

ಉಡುಪಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯಾಗಿ ಮಾಲಾ ಅಡಿಗ ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಕಕ್ಕುಂಜೆ ಮಾಲಾ ಅಡಿಗರ ಮೂಲ ಎಂಬುದು ವಿಶೇಷ.

ಕಕ್ಕುಂಜೆ ರಮೇಶ್ ಅಡಿಗ ಹಾಗೂ ಜಯಾ ಅಡಿಗ ದಂಪತಿಯ ಹಿರಿಯ ಪುತ್ರಿಯಾಗಿರುವ ಮಾಲಾ ಅಡಿಗ ಅಮೆರಿಕದಲ್ಲಿಯೇ ಹುಟ್ಟಿ ಬೆಳೆದವರು. ಕಾನೂನು ಪದವಿ ಪಡೆದು ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ತಂದೆ ರಮೇಶ್ ಅಡಿಗರು ಬೆಂಗಳೂರಿನಲ್ಲಿ ಎಂಬಿಬಿಎಸ್‌ ಮುಗಿಸಿದ ಕೂಡಲೇ ಅಮೆರಿಕಕ್ಕೆ ತೆರಳಿ ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾಗಿದ್ದಾರೆ.

ಜಿಲ್‌ ಬೈಡನ್ ನೀತಿ ನಿರ್ದೇಶಕಿಯಾಗಿ ಮಾಲಾ ನೇಮಕವಾದ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರದಲ್ಲಿರುವ ಅವರ ಸೋದರತ್ತೆ ನಿರ್ಮಲಾ ಉಪಾಧ್ಯಾಯ (ರಮೇಶ್ ಅಡಿಗರ ತಂಗಿ) ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಸಂದರ್ಭ ‘ಪ್ರಜಾವಾಣಿ’ ಜತೆ ಸಂಭ್ರಮ ಹಂಚಿಕೊಂಡ ನಿರ್ಮಲಾ ‘ಮಾಲಾ ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲಾದರೂ ಭಾರತದ ಮೂಲ ಮರೆತಿಲ್ಲ. ನೆಲದ ಸಂಸ್ಕೃತಿಯನ್ನು ಬಹಳ ಇಷ್ಟಪಡುತ್ತಾರೆ’ ಎಂದರು.

ADVERTISEMENT

ತುಂಬಾ ಸೌಮ್ಯ ಹಾಗೂ ಕುತೂಹಲ ಸ್ವಭಾವದ ಮಾಲಾ ಕೆಲವು ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದರು. 2019ರಲ್ಲಿ ಪತಿ ಚಾರ್ಲ್ಸ್‌, ಪುತ್ರಿ ಆಶಾ ಹಾಗೂ ತಂದೆ ರಮೇಶ್ ಅಡಿಗರ ಜತೆಗೆ ಬೆಂಗಳೂರಿಗೆ ಬಂದಿದ್ದರು ಎಂದು ಅವರೊಟ್ಟಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು.

ಸೋದರತ್ತೆ ಮಗಳು ಸುಜಾತಾ ಮಾತನಾಡಿ, ‘ಮಾಲಾಗೆ ಸಾಂಪ್ರದಾಯಿಕ ಬ್ರಾಹ್ಮಣ ಶೈಲಿಯ ಖಾದ್ಯಗಳು ಎಂದರೆ ಅಚ್ಚುಮೆಚ್ಚು. ಟೊಮೆಟೊ ಸಾಂಬರ್‌ ಹಾಗೂ ಆಲೂಗಡ್ಡೆ ಪಲ್ಯವನ್ನು ಚಪ್ಪರಿಸಿ ತಿನ್ನುತ್ತಾರೆ. ಶ್ವಾನಗಳ ಮೇಲೆಯೂ ಹೆಚ್ಚು ಪ್ರೀತಿ. ಏಳು ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಇಲ್ಲಿನ ಕಡಲ ತೀರ, ಕುಂದೇಶ್ವರ ದೇವಸ್ಥಾನ, ಬಬ್ಬರ್ಯನ ಕಟ್ಟೆಯಲ್ಲಿರುವ ಪೂರ್ವಜರ ಮನೆಗೆ ಭೇಟಿಕೊಟ್ಟಿದ್ದರು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.