ADVERTISEMENT

ಉಡುಪಿ: ಮಲ್ಪೆ ಈಗ ಮತ್ತಷ್ಟು ಸುಂದರ

ಕಡಲ ಕಿನಾರೆಯಲ್ಲಿ ಎಲ್‌ಇಡಿ ಲೈಟ್‌ಗಳ ಅಳವಡಿಕೆ, ಹೊಸ ಮಾದರಿ ವಾಟರ್ ಸ್ಪೋರ್ಟ್ಸ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 22:30 IST
Last Updated 16 ಜನವರಿ 2023, 22:30 IST
ಎಲ್‌ಇಡಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಮಲ್ಪೆ ಬೀಚ್‌.
ಎಲ್‌ಇಡಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಮಲ್ಪೆ ಬೀಚ್‌.   

ಉಡುಪಿ: ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡು ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿರುವ ಮಲ್ಪೆ ಮತ್ತಷ್ಟು ಆಕರ್ಷಣೀಯವಾಗಿದೆ.

ಮಲ್ಪೆ ಬೀಚ್‌ನಲ್ಲಿ ಶುಚಿತ್ವ, ಸುರಕ್ಷತೆ ಹಾಗೂ ಮನರಂಜನೆಗೆ ಗರಿಷ್ಠ ಒತ್ತು ನೀಡಲು ಹಲವು ಸೌಲಭ್ಯಗಳನ್ನು ಕಲ್ಪಿಸಳಾಗಿದ್ದು ಪ್ರವಾಸಿಗರು ವಿಭಿನ್ನ ಅನುಭವವನ್ನು ಪಡೆಯಬಹುದು.

ರಾತ್ರಿ ವೇಳೆಯೂ ಬೀಚ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವಂತೆ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಹೊಸ ಬಗೆಯ, ರೋಮಾಂಚನಗೊಳಿಸುವ ವಾಟರ್‌ಸ್ಪೋರ್ಟ್ಸ್ ಸೌಲಭ್ಯ ಕಲ್ಪಿಸಲಾಗಿದೆ.

ADVERTISEMENT

ಸುರಕ್ಷತೆ, ಭದ್ರತೆಗೆ ಒತ್ತು:

ಮಲ್ಪೆ ಬೀಚ್‌ ಅನ್ನು 4 ವಲಯಗಳಾಗಿ ವಿಂಗಡಿಸಲಾಗಿದ್ದು, 100 ಮೀಟರ್ ಉದ್ದ ಹಾಗೂ 260 ಮೀಟರ್ ಅಗಲವಾದ ಪ್ರದೇಶವನ್ನು ಈಜು ವಲಯವಾಗಿ ಗುರುತಿಸಲಾಗಿದ್ದು, 100 ಮೀಟರ್‌ ಉದ್ದ ಹಾಗೂ 130 ಮೀಟರ್ ಅಗಲವಾದ ವಲಯವನ್ನು ಮೋಟಾರ್‌ ಚಾಲಿತ ವಾಟರ್‌ಸ್ಪೋರ್ಟ್ಸ್‌ಗಳಿಗೆ ಮೀಸಲಿಡಲಾಗಿದೆ.

ಪ್ರವಾಸಿಗರ ಸುರಕ್ಷತೆಗೆ ನಿರಂತರ ಗಸ್ತು ತಿರುಗಲು 2 ಹೊಸ ಜೆಟ್‌, ಎಟಿವಿ ಬೈಕ್‌ಗಳನ್ನು ನಿಯೋಜಿಸಲಾಗಿದೆ. 6 ಮಂದಿ ಎನ್‌ಐಡಬ್ಲ್ಯೂಎಸ್-ಆರ್‌ಎಲ್‌ಎಸ್ ಪ್ರಮಾಣೀಕೃತ ಲೈಫ್‌ಗಾರ್ಡ್‌ಗಳು ರಕ್ಷಣೆಗೆ ಸನ್ನದ್ಧರಾಗಿರುತ್ತಾರೆ. 3 ಮಂದಿ ಬೀಚ್ ಮಾರ್ಷಲ್‌ಗಳು ಬೀಚ್‌ನಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತಾರೆ.

ಪ್ರವಾಸಿಗರ ಚಲನವಲನ, ಸುರಕ್ಷತೆ ಗಮನಿಸಲು 4 ಲೈಫ್‌ಗಾರ್ಡ್ ಟವರ್‌ಗಳನ್ನು ನಿರ್ಮಿಸಲಾಗಿದೆ. ಬೀಚ್‌ನಲ್ಲಿ 35, ಬೀಚ್‌ಗೆ ಸಂಪರ್ಕಿಸುವ ದಾರಿಯಲ್ಲಿ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 14 ಅನೌನ್ಸ್‌ಮೆಂಟ್ ಸಿಸ್ಟಂಗಳು, 10 ವಾಕಿಟಾಕಿ, 12 ರೆಸ್ಕೂ ಟ್ಯೂಬ್, 3 ಬೈನಾಕ್ಯುಲರ್‌ಗಳನ್ನು ಒದಗಿಸಲಾಗಿದೆ.

ಸ್ವಚ್ಛತೆ:

ಸಮುದ್ರ ಕಿನಾರೆಯ ಸ್ವಚ್ಛತೆಗೆ ವಿಶೇಷ ಕ್ಲೀನಿಂಗ್ ಮಷೀನ್ ಕಸ ವಿಲೇವಾರಿಗೆ ಟಿಪ್ಪರ್ ವ್ಯವಸ್ಥೆ ಇದೆ. 8 ಮಂದಿ 13 ತಾಸು ಶುಚಿತ್ವಕ್ಕೆ ಶ್ರಮಿಸಲಿದ್ದಾರೆ. ಆಹಾರ ಸ್ಮಾಲ್‌ಗಳು ಹಾಗೂ ಬೀಚ್‌ನ ಇತರೆಡೆ 80 ಕಸದ ಬುಟ್ಟಿಗಳನ್ನು ಇರಿಸಲಾಗಿದ್ದು, ಹಸಿ ಕಸ, ಒಣಕಸ ಪ್ರತ್ಯೇಕಿಸಲಾಗುತ್ತಿದೆ. ಪ್ರತಿದಿನ 3 ರಿಂದ 12 ಟನ್‌ ತ್ಯಾಜ್ಯ ಸಂಗ್ರಹ ವಾಗುತ್ತಿದೆ.

ಮೂಲಸೌಕರ್ಯ:

ಬೀಚ್‌ನಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಗುಡಿಸಲು ಮಾದರಿಯ ಹಟ್‌ ನಿರ್ಮಿಸಲಾಗಿದ್ದು ಕುಡಿಯುವ ನೀರು, ಆಂಬುಲೆನ್ಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಲಗೇಜ್ ರೂಂ ವ್ಯವಸ್ಥೆ ಮಾಡಲಾಗಿದೆ.

ಆಹಾರ ಮಳಿಗೆ, ಸೀ ಫುಡ್‌ ಕಾಟೇಜ್:

ತುಳುನಾಡಿನ ವಿಶೇಷ ಖಾದ್ಯಗಳು ಸೇರಿ ಕಾಂಟಿನೆಂಟಲ್, ಇಟಾಲಿಯನ್, ಚೈನೀಸ್ ಖಾದ್ಯಗಳನ್ನು ತಯಾರಿಸುವ ಕೆಫೆಯ ವ್ಯವಸ್ಥೆ ಇದೆ.

ವಾಟರ್ ಸ್ಪೋರ್ಟ್ಸ್:

ಮಲ್ಪೆಯ ವಿಶೇಷ ಆಕರ್ಷಣೆಯಾಗಿರುವ ವಾಟರ್‌ಸ್ಪೋರ್ಟ್ಸ್‌ನಲ್ಲಿ ಆರಂಭಿಕ ಹಾಗೂ ಸುಧಾರಿತ ಸೌಲಭ್ಯಗಳು ಇವೆ. ಸ್ಕೂಬಾ ಡೈವಿಂಗ್‌ಗೆ ಪ್ರವಾಸಿಗರನ್ನು ಕರೆದೊಯ್ಯಲಾಗುವುದು. ಸೈಲಿಂಗ್ ಬೋಟ್, ದ್ವೀಪದಲ್ಲಿ ಕ್ಲಿಫ್ ಡ್ರೈವ್, ಸ್ನಾರ್ಕೆಲಿಂಗ್, ಕಯಾಕ್, ಸರ್ಫ್, ಸ್ಟ್ಯಾಂಡ್ ಅಪ್ ಪೆಡಲ್ ವ್ಯವಸ್ಥೆಯೂ ಇದೆ. 60 ಮೀಟರ್ ಉದ್ದದ ಯಾಚ್, ಹೆಲಿ ರೈಡ್ ವ್ಯವಸ್ಥೆಯನ್ನು ಶೀಘ್ರ ಪರಿಚಯಿಸಲಾಗುತ್ತದೆ.

ಮಲ್ಪೆಯಲ್ಲಿ ವಿಶೇಷ ಅನುಭವ ನೀಡಲು ತೇಲುವ ಸೇತುವೆ, ವಿಂಚ್ ಪ್ಯಾರಾಸೈಲ್, ಬೀಚ್ ಪ್ಯಾರಾಸೈಲ್, ಜೆಟ್ ಸ್ಕೀ, ಟೋವಿಂಗ್ ರೈಡ್, ಬನಾನಾ ರೈಡ್, ಬಂಪಿ ರೈಡ್, ಡ್ರಾಗನ್ ರೈಡ್, ರೋರ್ಬಿಂಗ್, ಬೋಟ್ ಚಾರ್ಟರ್, ಐಲ್ಯಾಂಡ್ ಹೋಪಿಂಗ್, ಡಾನ್ ವಾಚಿಂಗ್, ಡೀಪ್ ಸೀ ಫಿಶಿಂಗ್, ಎಟಿವಿ ಬೈಕ್ ರೈಡ್‌, ಟ್ರಾಂಪೋಲಿನ್ ವ್ಯವಸ್ಥೆ ಕೂಡ ಇದೆ.

ರಾತ್ರಿ ದೀಪಾಲಂಕಾರ:

ಮಲ್ಪೆ ಬೀಚ್‌ನ ಗಾಂಧಿ ಪ್ರತಿಮೆಯಿಂದ ಸಮುದ್ರ ಕಿನಾರೆವರೆಗೆ ಚೇತೋಹಾರಿ ದೀಪಾಲಂಕಾರದ ವ್ಯವಸ್ಥೆ ಇದ್ದು, 68 ವಿಶೇಷ ಮಾದರಿಯ ಎಲ್‌ಇಡಿ ಲೈಟ್‌ಗಳನ್ನು ಹಾಕಲಾಗಿದೆ. ಸುಮಾರು 1.3 ಕಿ.ಮೀ ವಿಸ್ತಾರದಲ್ಲಿ ದೀಪಾಲಂಕಾರ ಕಣ್ಮನ ಸೆಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.