ADVERTISEMENT

ಬಂದರು ಅಭಿವೃದ್ಧಿಗೆ ₹850 ಕೋಟಿ ಯೋಜನೆ: ಜಲಸಾರಿಗೆ ಸಚಿವ ಮಂಕಾಳ ವೈದ್ಯ

ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:27 IST
Last Updated 9 ಅಕ್ಟೋಬರ್ 2025, 5:27 IST
ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಸಚಿವ ಮಂಕಾಳ ಎಸ್‌. ವೈದ್ಯ ನೆರವೇರಿಸಿದರು
ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಸಚಿವ ಮಂಕಾಳ ಎಸ್‌. ವೈದ್ಯ ನೆರವೇರಿಸಿದರು   

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನ ಸರ್ವತೋಮುಖ ಅಭಿವೃದ್ಧಿಗಾಗಿ ₹850 ಕೋಟಿಯ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್‌. ವೈದ್ಯ ಹೇಳಿದರು.

ಕೇಂದ್ರ ಪುರಸ್ಕೃತ ಪಿ.ಎಂ.ಎಂ.ಎಸ್‌.ವೈ. ಯೋಜನೆಯಡಿ ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಪ್ರಸ್ತಾವವನ್ನು ಅಂಗೀಕರಿಸಿ ಅನುದಾನ ನೀಡದಿದ್ದರೆ ರಾಜ್ಯ ಸರ್ಕಾರವೇ ಕಾಮಗಾರಿ ನಡೆಸಲಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಮೀನುಗಾರಿಕೆ ಹಾಗೂ ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯವಿರುವ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಬಂದರುಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಬಂದಿರುವ ಅನುದಾನವು ಸಿ.ಆರ್.ಝೆಡ್‌ನ ಕೆಲವು ನಿಯಮಾವಳಿಗಳಿಂದಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೆ ವಾಪಾಸು ಹೋಗಿದೆ. ಕೇಂದ್ರ ಸರ್ಕಾರವು ಸಿ.ಆರ್.ಝೆಡ್.ನ ನಿಯಮಾವಳಿಗಳನ್ನು ನೆರೆಯ ರಾಜ್ಯಗಳಾದ ಗೋವಾ ಮತ್ತು ಕೇರಳದಲ್ಲಿ ಇರುವ ಹಾಗೆ ಮಾಡಿದ್ದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮತ್ಸ್ಯಸಂಪದ ಯೋಜನೆಯು ಮೀನುಗಾರರಿಗೆ ಶಕ್ತಿ ತುಂಬಿದೆ. ಈ ಯೋಜನೆಯ ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು. ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಲಿದೆ. ಜಿಲ್ಲೆಯಲ್ಲಿ ಜೆಟ್ಟಿಗಳ ನಿರ್ಮಾಣ ಹಾಗೂ ಹೂಳೆತ್ತುವುದಕ್ಕೂ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮೀನುಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸಿದ್ದಯ್ಯ ಡಿ. ಉಪಸ್ಥಿತರಿದ್ದರು.

ಮಲ್ಪೆ ಬಂದರಿನಲ್ಲಿ ಹೆಚ್ಚಿನ ಬೋಟ್‌ಗಳ ನಿಲುಗಡೆಗೆ ಅನುಕೂಲ ಇಲ್ಲದ ಕಾರಣ ₹ 400 ಕೋಟಿ ವೆಚ್ಚದಲ್ಲಿ ಬಂದರು ವಿಸ್ತರಣೆ ಯೋಜನೆಯ ಕಾಮಗಾರಿ ಶೀಘ್ರ ಆರಂಭವಾಗಲಿದೆ.
– ಯಶ್‌ಪಾಲ್‌ ಸುವರ್ಣ, ಶಾಸಕ

ಹಂಗಾರಕಟ್ಟೆ: ಬಾರ್ಜ್ ಲೋಕಾರ್ಪಣೆ

ಸುಮಾರು ₹2.05 ಕೋಟಿ ವೆಚ್ಚದಲ್ಲಿ ಕೋಡಿ- ಬೆಂಗ್ರೆ ಹಂಗಾರಕಟ್ಟೆ ನದಿಯ ನಡುವೆ ಸಂಪರ್ಕ ಕಲ್ಪಿಸುವ ಮಧ್ಯಮ ಗಾತ್ರದ ಹೊಸ ಬಾರ್ಜ್ ಕಾವೇರಿಯನ್ನು ಸಚಿವ ಮಂಕಾಳ ವೈದ್ಯ ಬುಧವಾರ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಕೋಡಿ ಬೆಂಗ್ರೆಯಿಂದ ಹಂಗಾರಕಟ್ಟೆಗೆ ಸ್ಥಳೀಯರು ಹಾಗೂ ಪ್ರವಾಸಕ್ಕೆ ಬರುವವರಿಗೆ ಬಾರ್ಜ್‌ನಿಂದ ಅನುಕೂಲವಾಗಲಿದೆ ಎಂದರು. ಹಂಗಾರಕಟ್ಟೆ ಬಂದರಿನಲ್ಲಿ ಮೀನುಗಾರಿಕಾ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಬಂದರಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಜೊತೆಗೆ ಹೂಳೆತ್ತುವ ಕಾರ್ಯವನ್ನು ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ಮುಖಂಡರಾದ ದಿನೇಶ್ ಹೆಗ್ಡೆ ರಾಜು ಬಂಗೇರ ಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.