ಉಡುಪಿ: ಮಣಿಪಾಲ ಪ್ರದೇಶದಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲದೆ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರನ್ನು ತ್ಯಾಜ್ಯ ನೀರಿನ ಹೊಂಡದಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಲ್ಯಾಟರೆಟ್ ಶಿಲೆಯ ಪ್ರದೇಶವಾಗಿರುವುದರಿಂದ ನೀರು ಇಂಗುವುದಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಕೊಳಚೆ ನೀರನ್ನು ಚರಂಡಿಗೆ ಬಿಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಣಿಪಾಲದ ಅಪಾರ್ಟ್‌ಮೆಂಟ್ ನಿವಾಸಿಗಳು ಅಳಲು ತೋಡಿಕೊಂಡರು.
ಕೊಳಚೆ ನೀರು ನಿರ್ವಹಣೆ ಕುರಿತು ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ಬಿಲ್ಡರ್‌ಗಳಿಗೆ ನಗರಸಭೆಯು ವಸತಿ ಸಮುಚ್ಚಯ ನಿರ್ಮಿಸಲು ಪರವಾನಗಿ ನೀಡುತ್ತದೆ. ಅವರು ತ್ಯಾಜ್ಯ ನೀರು ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಮಾಡದ ಕಾರಣ ವಸತಿ ಸಮುಚ್ಚಯ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಗಿದೆ ಎಂದರು.
‘ನಗರಸಭೆಯವರು ವಸತಿ ಸಮುಚ್ಚಯ ನಿವಾಸಿಗಳಿಗೆ ನೋಟಿಸ್ ಕೊಟ್ಟು ಹೆದರಿಸುವುದಲ್ಲ, ಬಿಲ್ಡರ್‌ಗಳನ್ನು ಹಿಡಿಯಿರಿ, ₹40 ಲಕ್ಷ, ₹50 ಲಕ್ಷಕ್ಕೆ ಫ್ಲ್ಯಾಟ್ ಖರೀದಿಸಿದವರು ತಿಂಗಳಿಗೆ ₹3 ಸಾವಿರ ನಿರ್ವಹಣಾ ವೆಚ್ಚ ನೀಡಬೇಕಾಗಿದೆ. ನಗರಸಭೆಯೇ ಸಮರ್ಪಕ ಒಳಚರಂಡಿ ಮತ್ತು ಎಸ್‌ಟಿಪಿ ವ್ಯವಸ್ಥೆ ಮಾಡಬೇಕು’ ಎಂದು ಬಹುತೇಕರು ಒತ್ತಾಯಿಸಿದರು.
ದೊಡ್ಡ ಐಷಾರಾಮಿ ವಸತಿ ಸಮುಚ್ಚಯದವರಲ್ಲಿಗೆ ಅಧಿಕಾರಿಗಳು ಹೋಗುವುದಿಲ್ಲ ಸಣ್ಣ ಸಣ್ಣ ಫ್ಯಾಟ್‌ಗಳಲ್ಲಿರುವವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದರು.
ಸಂತೆಕಟ್ಟೆಯಲ್ಲಿ ಹಲವು ವಸತಿ ಸಮುಚ್ಚಯಗಳಿದ್ದರೂ ಒಳಚರಂಡಿ ವ್ಯವಸ್ಥೆ ಇಲ್ಲ. ಅದರಿಂದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಪರಿಹರಿಸಲು ನಗರಸಭೆ ಮುಂದಾಗಬೇಕು ಎಂದು ಆ ಭಾಗದ ಫ್ಲ್ಯಾಟ್ ನಿವಾಸಿಗಳು ಸಭೆಯಲ್ಲಿ ಒತ್ತಾಯಿಸಿದರು.
ವಿ.ಪಿ. ನಗರದಲ್ಲಿ ₹ 75 ಲಕ್ಷ ಖರ್ಚು ಮಾಡಿ ತ್ಯಾಜ್ಯ ನೀರು ಹರಿಸಲು ನಾವೇ ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆ ಮಾಡಿದ್ದೇವೆ. ಈಗ ಅದರ ನಿರ್ವಹಣೆಯನ್ನೂ ನಾವೇ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕೆಲವರು ದೂರಿದರು.
ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ನಗರದ ವಿವಿಧೆಡೆ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು ಕೊಳಚೆ ನೀರನ್ನು ನೇರವಾಗಿ ಮಳೆ ನೀರು ಹರಿಯುವ ಚರಂಡಿಗೆ ಬಿಡುವುದರಿಂದ ಸಮೀಪದ ಮನೆಗಳ ಬಾವಿ ನೀರು ಕಲುಷಿತವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಸಮಸ್ಯೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಎಲ್ಲ ಕಡೆ ಯುಜಿಡಿ ವ್ಯವಸ್ಥೆ ಮಾಡುವುದು ಸುಲಭದ ಮಾತಲ್ಲ. ಭೌಗೋಳಿಕವಾದ ಸಮಸ್ಯೆಯೂ ಇದೆ. ತ್ಯಾಜ್ಯ ನೀರು ಸಂಗ್ರಹಿಸುವ ಸೆಸ್‌ಪೂಲ್ ಯಂತ್ರಗಳ ಬಾಡಿಗೆಯನ್ನು ಶೇ 50ರಷ್ಟು ರಿಯಾಯಿತಿಯಲ್ಲಿ ನೀಡುತ್ತಿದ್ದೇವೆ. ಅದನ್ನು ಬಳಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಸದಸ್ಯರು ಭಾಗವಹಿಸಿದ್ದರು.
ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಯುಜಿಡಿ ವ್ಯವಸ್ಥೆ ಮಾಡುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೂ ಮೊದಲು ತ್ಯಾಜ್ಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆಯಶ್ಪಾಲ್ ಸುವರ್ಣ, ಶಾಸಕ
ಪರಿಹಾರ ಕಾಣದೆ ಸಭೆ ಅಂತ್ಯ
ನಗರದಲ್ಲಿ ಮಳೆ ನೀರು ಹರಿಯುವ ಚರಂಡಿಗಳಿಗೆ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು ಹರಿಸುವ ಸಮಸ್ಯೆಯ ಪರಿಹಾರಕ್ಕಾಗಿ ವಸತಿ ಸಮುಚ್ಚಯಗಳ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆದರೂ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಾಗಿಲ್ಲ. ನಗರದೆಲ್ಲೆಡೆ ಯುಜಿಡಿ ವ್ಯವಸ್ಯೆ ಇಲ್ಲದಿರುವುದರಿಂದಲೇ ಸಮಸ್ಯೆ ಉದ್ಬವವಾಗಿದೆ ಎಂದು ಬಹುತೇಕ ವಸತಿ ಸಮುಚ್ಚಯ ನಿವಾಸಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.