ಕುಂದಾಪುರ: ‘ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನಿಂದ (ಮಾಹೆ) ಕರ್ನಾಟಕ, ನೆರೆಯ ರಾಜ್ಯಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ‘ಮಣಿಪಾಲ ಆರೋಗ್ಯ ಕಾರ್ಡ್ 2025’ರ ನೋಂದಣಿ ಪ್ರಾರಂಭಿಸಿರುವುದಾಗಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಘೋಷಿಸಿದ್ದಾರೆ’ ಎಂದು ಕೆಎಂಸಿ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತಕ್ಕೆ ಆರೋಗ್ಯ ಸೇವೆ ನೀಡುವ ಧ್ಯೇಯ ಹೊಂದಿದ್ದ ಮಣಿಪಾಲ ಸಂಸ್ಥೆಯ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ ದೂರದೃಷ್ಟಿ, ಮಾಹೆ ಕುಲಾಧಿಪತಿ ಡಾ.ರಾಮದಾಸ್ ಎಂ. ಪೈ ಮಾರ್ಗದರ್ಶನದಲ್ಲಿ 2000ರಲ್ಲಿ ಪ್ರಾರಂಭಿಸಲಾದ ಯೋಜನೆ ಕೋಟ್ಯಾಂತರ ಫಲಾನುಭವಿಗಳನ್ನು ತಲುಪಿ, ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. 3,200 ಕುಟುಂಬಗಳ ನೋಂದಣಿಯಿಂದ ಪ್ರಾರಂಭವಾದ ಯೋಜನೆಗೆ ಕಳೆದ ಹಣಕಾಸು ವರ್ಷದಲ್ಲಿ 1.25 ಲಕ್ಷ ಕುಟುಂಬಗಳು ನೋಂದಣಿಯಾಗಿವೆ. 6.72 ಲಕ್ಷ ಸದಸ್ಯರಿಗೆ ಪ್ರಯೋಜನ ದೊರಕಲಿದೆ ಎಂದು ತಿಳಿಸಿದರು.
ಒಂದು, ಎರಡು ವರ್ಷಗಳ ಸದಸ್ಯತ್ವ ಆಯ್ಕೆಗಳನ್ನು ನೀಡಲಾಗಿದೆ. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯ ವಾಕ್ಯದಡಿ ಒಂದು ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹350, ಕೌಟುಂಬಿಕ ಕಾರ್ಡ್ ಆದರೆ ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ₹700, ಕುಟುಂಬ ಪ್ಲಸ್ ಯೋಜನೆಗೆ ಕಾರ್ಡ್‌ದಾರ, ಸಂಗಾತಿ, 25 ವರ್ಷದ ಒಳಗಿನ ಮಕ್ಕಳು, 4 ಪೋಷಕರು (ತಂದೆ, ತಾಯಿ, ಅತ್ತೆ, ಮಾವ) ₹900 ನಿಗದಿಸಲಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹600, ಕುಟುಂಬಕ್ಕೆ ₹950, ಕೌಟಂಬಿಕ ಪ್ಲಸ್ ಯೋಜನೆಗೆ ₹1,100 ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಪ್ರಯೋಜನಗಳು: ತಜ್ಞ, ಸೂಪರ್ ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ ಶೇ 50 ರಿಯಾಯಿತಿ (ಒಪಿಡಿ ದಿನಗಳು). ರೋಗ ನಿರ್ಣಯ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ 25 ರಿಯಾಯಿತಿ. ರೇಡಿಯಾಲಜಿ, ಒಪಿಡಿ ಕಾರ್ಯವಿಧಾನಗಳು, ಮಧುಮೇಹ ಪಾದದ ಆರೈಕೆ ಮೇಲೆ ಶೇ 20 ರಿಯಾಯಿತಿ. ಡಯಾಲಿಸಿಸ್‌ನಲ್ಲಿ ₹100 ರಿಯಾಯಿತಿ. ಆಸ್ಪತ್ರೆ ಔಷಧಿಗಳ ಮೇಲೆ ಶೇ 10ವರೆಗೆ ರಿಯಾಯಿತಿ. ಸಾಮಾನ್ಯ ವಾರ್ಡ್ ಒಳರೋಗಿಗಳ ಬಿಲ್‌ಗಳಲ್ಲಿ ಶೇ 25 ರಿಯಾಯಿತಿ (ಉಪಭೋಗ್ಯ ವಸ್ತುಗಳು, ಪ್ಯಾಕೇಜ್‌ಗಳನ್ನು ಹೊರತುಪಡಿಸಿ) ನೀಡಲಾಗುತ್ತದೆ.
ಕಾರ್ಡ್‌ದಾರರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆ, ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ, ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ, ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ, ಗೋವಾದ ಮಣಿಪಾಲ ಆಸ್ಪತ್ರೆ, ಮಣಿಪಾಲ, ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದು. ಆಸ್ಪತ್ರೆಗಳಲ್ಲಿನ ರಿಯಾಯಿತಿ, ಮಾಹಿತಿಗೆ www.manipalhealthcard.com, 9980854700 ಅಥವಾ 0820 2923748 ಸಂಪರ್ಕಿಸಬಹುದು ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಿಸಬಹುದು ಎಂದು ತಿಳಿಸಿದರು.
ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್, ಪ್ರತಿನಿಧಿಗಳಾದ ಭದ್ರಯ್ಯ (9448872666), ನಾಗರಾಜ್ ಖಾರ್ವಿ (9916888916), ರಕ್ಷಿತ್ ಶೆಟ್ಟಿ ವಂಡ್ಸೆ (9743366746), ಮಂಗಳೂರಿನ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೊಆಪರೇಟಿವ್ ಲಿಮಿಟೆಡ್ (8884459066) ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.