ADVERTISEMENT

ಸಮುದ್ರಕ್ಕೆ ಉರುಳಿದ ಕಾರು: ಒಬ್ಬ ಸಾವು, ಇನ್ನೂಬ್ಬ ನಾಪತ್ತೆ, ಇಬ್ಬರು ಆಸ್ಪತ್ರೆಗೆ

ಮರವಂತೆ: ಹೆದ್ದಾರಿಯಿಂದ ಸಮುದ್ರಕ್ಕೆ ಉರುಳಿದ ಕಾರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 15:55 IST
Last Updated 3 ಜುಲೈ 2022, 15:55 IST
ವಿರಾಜ್ ಆಚಾರ್
ವಿರಾಜ್ ಆಚಾರ್   

ಕುಂದಾಪುರ: ಕುಂದಾಪುರ ಕಡೆಯಿಂದ‌ ಬೈಂದೂರಿನತ್ತ ಚಲಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ರಸ್ತೆಯಿಂದ ಪಲ್ಟಿಯಾಗಿ, 40 ಅಡಿ ಆಳಕ್ಕೆ ಉರುಳಿ ಅರಬ್ಬಿ ಸಮುದ್ರ ಪಾಲಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಬೀಚ್‌ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಕಾರಿನ ಚಾಲಕ ಸಾವನ್ನಪ್ಪಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ. ಇನ್ನಿಬ್ಬರು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರದ ಬೀಜಾಡಿಯ ಗೋಳಿಬೆಟ್ಟು ನಿವಾಸಿ, ವಿಲಾಸ್ ಮಾರ್ಬಲ್‌ ಮಾಲಿಕ ರಮೇಶ್ ಆಚಾರ್ ನೇರಂಬಳ್ಳಿ ಅವರ ಪುತ್ರ ವಿರಾಜ್ ಆಚಾರ್‌(28)ಮೃತಪಟ್ಟವರು. ಕಾಡಿನಕೊಂಡ ನಿವಾಸಿ ನಾರಾಯಣ ಆಚಾರ್ ಪುತ್ರ ರೋಶನ್ ಆಚಾರ್ (23) ನಾಪತ್ತೆಯಾಗಿದ್ದಾರೆ. ಗಾಯಾಳುಗಳನ್ನು ಕಾಡಿನಕೊಂಡ ನಿವಾಸಿ ಕಾರ್ತಿಕ್ (22) ಹಾಗೂ ಬಸ್ರೂರ್ ಮೂರುಕೈ ಬಳಿಯ ಸಂದೇಶ್ (28) ಎಂದು ಗುರುತಿಸಲಾಗಿದೆ. ಈ ಪೈಕಿ ಕಾರ್ತಿಕ್ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಘಟನೆಯ ವಿವರ : ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ವಿರಾಜ್ ಆಚಾರ್ ತಮ್ಮ ಸಹೋದರ ಸಂಬಂಧಿಗಳು ಹಾಗೂ ಸ್ನೇಹಿತನೊಂದಿಗೆ ಕಾರಿನಲ್ಲಿ ಕುಂದಾಪುರ ಕಡೆಯಿಂದ ಬೈಂದೂರು‌ ಕಡೆಗೆ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಬೀಚ್ ಬಳಿ ಕಾರು ಸಮುದ್ರದ ತಡೆಗೋಡೆಗಳಿಗೆ ಹಾಕಲಾಗಿದ್ದ ಬಂಡೆ ಕಲ್ಲುಗಳ ಮೇಲೆ ಉರುಳಿ, ಬಳಿಕ ಸಮುದ್ರದ ತಳಭಾಗದ ಬಂಡೆ ಕಲ್ಲುಗಳ ನಡುವೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಸಂದೀಪ್‌ ಹಾಗೂ ಕಾರ್ತಿಕ್ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ.

ಅಪಘಾತದಿಂದ ಚೇತರಿಸಿಕೊಂಡು ಹೆದ್ದಾರಿಗೆ ಬಂದ ಸಂದೀಪ್ 2 ಕಿ.ಮೀ ದೂರದ ತ್ರಾಸಿ ಜಂಕ್ಷನ್ ವರೆಗೆ ನಡೆದುಕೊಂಡು ಬಂದು, ಕೋಟೇಶ್ವರ-ಬೀಜಾಡಿ ಪರಿಸರದ‌ ಕೆಲ ಯುವಕರಿಗೆ ಘಟನೆಯ ಬಗ್ಗೆ ಮಾಹಿತಿ‌ ನೀಡಿ ಅವರನ್ನು‌ ಕರೆದುಕೊಂಡು ದುರಂತ‌ ನಡೆದ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಬಂಡೆಕಲ್ಲುಗಳ‌‌ ನಡುವೆ ಬಿದ್ದದ್ದ ಕಾರ್ತಿಕ್ ಅವರನ್ನು ರಕ್ಷಣೆ ಮಾಡಿ ಚಿಕಿತ್ಸೆಗೆಗಾಗಿ ಕುಂದಾಪುರದ ಆಸ್ಪತ್ರೆಗೆ ಸೇರಿಸಲಾಗಿತ್ತು.

ಭಾನುವಾರ ಮುಂಜಾನೆ ಕಾರನ್ನು ಮೇಲಕ್ಕೆತ್ತಿದ್ದು, ಸೀಟ್ ಬೆಲ್ಟ್ ಧರಿಸಿದ್ದ ಸ್ಥಿತಿಯಲ್ಲಿ ವಿರಾಜ್ ಅವರ ಮೃತದೇಹ ಪತ್ತೆಯಾಗಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.