ADVERTISEMENT

ಹವಳದಂತೆ ಹೊಳೆಯುವ ಮಂಗಳ ಗ್ರಹ ವೀಕ್ಷಿಸಿ: ಡಾ.ಎ.ಪಿ.ಭಟ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:58 IST
Last Updated 28 ಸೆಪ್ಟೆಂಬರ್ 2020, 14:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಸೆಪ್ಟೆಂಬರ್ ಅಂತ್ಯದವರೆಗೂ ಸಂಜೆಯ ವೇಳೆ ಪೂರ್ವ ಆಕಾಶದಲ್ಲಿ ಹವಳದಂತೆ ಕೆಂಬಣ್ಣದಲ್ಲಿ ಹೊಳೆಯುವ ಮಂಗಳ ಗ್ರಹ ಗೋಚರಿಸಲಿದ್ದು ಆಸಕ್ತರು ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಅ.13ರಂದು ಮಂಗಳ ಗ್ರಹ ಭೂಮಿಗೆ ಸಮೀಪ ಬರಲಿದೆ. 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಹತ್ತಿರವಾಗಿ ಮಂಗಳ ಗ್ರಹ ಬರುತ್ತದೆ. ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ. ಮಂಗಳ ಹತ್ತಿರ ಬಂದಾಗ ದೊಡ್ಡದಾಗಿ ಕಂಡು ರಾತ್ರಿಯಿಡೀ ಹವಳದಂತೆ ಕಾಣಿಸಲಿದೆ ಎಂದು ಅವರು ತಿಳಿಸಿದ್ದಾರೆ.

24 ಕೋಟಿ ಕಿ.ಮೀ ದೂರದಲ್ಲಿ ದೀರ್ಘ ವೃತ್ತಾಕಾರದಲ್ಲಿ ಸೂರ್ಯನ ಸುತ್ತ ಸುತ್ತಲು ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿ 15 ಕೋಟಿ ಕೀಮೀ ದೂರದಲ್ಲಿರುವ ಸೂರ್ಯನನ್ನು ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಿಗೊಮ್ಮೆ ಸಮಿಪಕ್ಕೆ ಬಂದು ದೂರ ಸರಿಯುತ್ತವೆ.

ADVERTISEMENT

ಅ.13ರಂದು ಭೂಮಿಗೆ 6.2 ಕೋಟಿ ಕಿ.ಮೀ ದೂರದಲ್ಲಿ ಮಂಗಳ ಗ್ರಹ ಹತ್ತಿರಕ್ಕೆ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕಿ.ಮೀ ದೂರಕ್ಕೆ ಸಾಗಿ ಚಿಕ್ಕದಾಗಿ ಗೋಚರಿಸುತ್ತದೆ ಎಂದರು.

ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮೀರಿಸುವ ಕೆಂಬಣ್ಣದ ಮಂಗಳ ಗ್ರಹ ಕಾಣುತ್ತದೆ. ಈ ತಿಂಗಳು ಪೂರ್ತಿ ಈ ದೃಶ್ಯ ಗೋಚರಿಸುತ್ತದೆ. ಅ.1ರಂದು ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಜತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನು ಬರಿಗಣ್ಣಿನಿಂದಲೇ ಕಾಣಬಹುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.