ADVERTISEMENT

ಭೂಮಿಗೆ ಹತ್ತಿರದಲ್ಲಿ ಕಾಣಲಿದೆ ಮಂಗಳ ಗ್ರಹ

ಅ.13ರಂದು 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಕಾಣಿಸಲಿರುವ ಅಂಗಾರಕ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:43 IST
Last Updated 12 ಅಕ್ಟೋಬರ್ 2020, 14:43 IST
ಮಂಗಳ ಗ್ರಹ
ಮಂಗಳ ಗ್ರಹ   

ಉಡುಪಿ: ಅಕ್ಟೋಬರ್‌ 13ರಂದು ಮಂಗಳಗ್ರಹ ಭೂಮಿಗೆ ಹತ್ತಿರವಾಗಿ ಕಾಣುತ್ತಾನೆ. ಈ ಆಕಾಶ ವಿಸ್ಮಯವನ್ನು ಖಗೋಳಾಸಕ್ತರು ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಯ ಸಮೀಪದಲ್ಲಿ ಮಂಗಳ ಗ್ರಹ ಕಾಣುತ್ತದೆ. ಸಮೀಪ ಬಂದಾಗ ಕೆಂಬಣ್ಣದಿಂದ ದೊಡ್ಡದಾಗಿ ಹೊಳೆಯುತ್ತ ರಾತ್ರಿ ಆಕಾಶದಲ್ಲಿ ಎಲ್ಲರನ್ನೂ ಸೆಳೆಯುತ್ತದೆ. ಅ.13 ರಂದು ಭೂಮಿಗೆ ಸಮೀಪ ಅಂದರೆ 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಕಾಣಿಸಲಿದ್ದು, ವಾರವಿಡಿ ಬರಿಗಣ್ಣಿಗೆ ಗೋಚರಿಸಲಿದೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ ಎಂದು ತಿಳಿಸಿದ್ದಾರೆ.

ಕೆಂಡದಂತೆ ಕಾಣುವ ಕಾರಣಕ್ಕೆ ಮಂಗಳ ಗ್ರಹಕ್ಕೆ ಅಂಗಾರಕ ಎಂಬ ಹೆಸರು ಬಂದಿದ್ದು, ಯಾವಾಗಲೂ ಹೀಗೆ ಕಾಣುವುದಿಲ್ಲ. 2021 ಡಿಸೆಂಬರ್ ಸಮಯಕ್ಕೆ ಭೂಮಿಯಿಂದ ಸುಮಾರು 39 ಕೋಟಿ ಕಿ.ಮೀ ದೂರದಲ್ಲಿ ಕಾಣುವ ಮಂಗಳ ಪ್ರತಿ 2 ವರ್ಷ 2 ತಿಂಗಳಿಗೊಮ್ಮೆ ಹತ್ತಿರ ಬರುತ್ತಾನೆ. ಅ.13ರಂದು ಭೂಮಿಗೆ ಹತ್ತಿರವಾಗಿ ಕಾಣುವಷ್ಟು ಮತ್ತೆ ಕಾಣಿಸಿಕೊಳ್ಳುವುದು 2,035ಕ್ಕೆ ಮಾತ್ರ. ಹಿಂದೆ 2003ರಲ್ಲಿ 2018 ರಲ್ಲಿ ಭೂಮಿಗೆ ಹತ್ತಿರದಲ್ಲಿ ಮಂಗಳ ಗ್ರಹ ಗೋಚರಿಸಿತ್ತು ಎಂದರು.

ADVERTISEMENT

ಸೌರವ್ಯೂಹದ ಬೇರಾವ ಗ್ರಹವೂ ಕೆಂಪು ಬಣ್ಣದಿಂದ ಕಾಣುವುದಿಲ್ಲ. ವಾತಾವರಣವಿಲ್ಲದ ಮಂಗಳ ಗ್ರಹವು ಕಬ್ಬಿಣ ಆಕ್ಸೈಡ್‌ನ ಹುಡಿಗಳ ಧೂಳು, ಸೂರ್ಯನ ಬೆಳಕನ್ನು ಹೀರಿ ಕೆಂಬಣ್ಣ ಹೊರಸೂಸುವುದರಿಂದ ಮಂಗಳ ಕೆಂಬಣ್ಣದಲ್ಲಿ ಕಾಣುತ್ತದೆ.

ಬರಿಗಣ್ಣಿಗೆ ಕಾಣುವ ಗ್ರಹಗಳಾದ ಶುಕ್ರ, ಮಂಗಳ, ಗುರು, ಶನಿ ನಮಗೆ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ, ಸೂರ್ಯನಿಂದ ಹೆಚ್ಚುಕಡಿಮೆ ಒಂದೇ ದೂರದಲ್ಲಿದ್ದರೂ, ಭೂಮಿಯಿಂದ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದೂರದಲ್ಲಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

1964ರಿಂದ ಮಂಗಳನ ಅದ್ಯಯನಕ್ಕಾಗಿ ಕೃತಕ ಉಪಗ್ರಹಗಳನ್ನು ಹಾರಿಸಲಾಗಿದ್ದರೂ ಶೇ 60 ರಷ್ಟು ಸಫಲವಾಗಿಲ್ಲ. 2018ರ ಹೊತ್ತಿಗೆ 8 ಕೃತಕ ಉಪಗ್ರಹಗಳು ಮಂಗಳನ ಅದ್ಯಯನ ನಡೆಸುತ್ತಿವೆ. ಇಲ್ಲಿಯವರೆಗೆ 56 ಕೃತಕ ಉಪಗ್ರಹಗಳು ಅದ್ಯಯನಕ್ಕೆ ತೆರಳಿದ್ದರೂ ಕೇವಲ 26 ಮಾತ್ರ ಸಫಲವಾಗಿವೆ.

2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಸಮೀಪವಾಗುವ ಸಂದರ್ಭಮಂಗಳನ ಅದ್ಯಯನಕ್ಕಾಗಿ ಹೆಚ್ಚಾಗಿ ಕಾಲ ನಿಗದಿ ಮಾಡಲಾಗುತ್ತದೆ. ರಷ್ಯಾ, ಅಮೆರಿಕ ಮಾತ್ರ ಮಂಗಳನ ಅಂಗಳದಲ್ಲಿ ಕೃತಕ ಉಪಗ್ರಹಗಳನ್ನು ಇಳಿಸಿ ಅದ್ಯಯನ ಮಾಡಿದ ರಾಷ್ಟ್ರಗಳಾಗಿವೆ. ಯುರೋಪಿಯನ್ ಸ್ಪೇಸ್ ಎಜೆನ್ಸಿ ಮತ್ತು ಭಾರತವು ಕೃತಕ ಉಪಗ್ರಹಗಳನ್ನು ಕಳುಹಿಸಿ ಮಂಗಳನ ಸುತ್ತ ಅದ್ಯಯನ ನಡೆಸಿ ಯಶಸ್ಸು ಕಂಡಿವೆ ಎಂದು ಡಾ.ಎ.ಪಿ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.