ADVERTISEMENT

ಕೊರೊನಾ ವಿರುದ್ಧದ ಹೋರಾಟಕ್ಕೆ ಮಾಸ್ಕ್ ಅಸ್ತ್ರ

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ: ಜಿಲ್ಲಾಧಿಕಾರಿ ಜಗದೀಶ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 12:34 IST
Last Updated 18 ಜೂನ್ 2020, 12:34 IST
ಗುರುವಾರ ನಗರದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಮಾಸ್ಕ್ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಿಕೆಯ ಕುರಿತು ಅರಿವು ಮೂಡಿಸಲಾಯಿತು.
ಗುರುವಾರ ನಗರದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಮಾಸ್ಕ್ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಿಕೆಯ ಕುರಿತು ಅರಿವು ಮೂಡಿಸಲಾಯಿತು.   

ಉಡುಪಿ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

ಗುರುವಾರ ನಗರಸಭೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ಮಾಸ್ಕ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.‌

ಮಾಸ್ಕ್ ಬಳಕೆಯಿಂದ ಶೇ 50ರಷ್ಟು ಸೋಂಕು ಹರಡುವಿಕೆ ತಡೆಯಬಹುದು. ಉಡುಪಿಯಲ್ಲಿ ಹಲವರು ಮಾಸ್ಕ್ ಹಾಕದೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ನಿರ್ಲಕ್ಷ್ಯ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೂ ₹ 27,000 ದಂಡ ವಸೂಲಿ ಮಾಡಲಾಗಿದೆ. ಮುಂದೆ ಮಾಸ್ಕ್‌ ಸರಿಯಾಗಿ ಧರಿಸದವರಿಗೂ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲೆ ನಂಬರ್ 1

ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಈಗ ಉಡುಪಿ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಗುಣಮುಖರಾಗುತ್ತಿರುವ ಜಿಲ್ಲೆಯಲ್ಲಿ ನಂಬರ್ ಒನ್‌ ಸ್ಥಾನಕ್ಕೇರಿದೆ.

ಜಿಲ್ಲೆಯಲ್ಲಿ ಸದ್ಯ 130 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲರೂ ನಾಲ್ಕೈದು ದಿನಗಳಲ್ಲಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.‌

ಹೊರ ರಾಜ್ಯಗಳಿಂದ ಬಂದವರ ಜತೆ ಸಾಕಷ್ಟು ಅಂತರ ಕಾಪಾಡಿಕೊಳ್ಳುವುದು ಮುಖ್ಯ. ಮಹಾರಾಷ್ಟ್ರದಿಂದ ಬಂದವರನ್ನು 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರಿಸಿ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಹೋಂ ಕ್ವಾರಂಟೈನ್‌ ಮನೆಗಳಿಂದ ಯಾರಾದರೂ ಹೊರಗೆ ಬಂದರೆ ಸ್ಥಳೀಯರು ತಕ್ಷಣ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಉಡುಪಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಯಾನಿಟೈಸರ್ ಹಾಗೂ ಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವ್ಯಾಪಾರಸ್ಥರು ಗ್ರಾಹಕರಿಗೆ ಕೈತೊಳೆಯುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ‘ಸೋಂಕು ಹರಡುವಿಕೆ ತಡೆಯಲು ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಡಿಎಚ್ಒ ಡಾ.ಸುಧೀರ್ ಚಂದ್ರ ಸೂಡ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

‘ಅಂತರಕ್ಕೆ ಛತ್ರಿ ಉಪಾಯ’

ಮಾಸ್ಕ್‌ ದಿನಾಚರಣೆ ಜಾಗೃತಿ ಜಾಥಾದಲ್ಲಿ ಅಂತರ ಕಾಯ್ದುಕೊಳ್ಳಲು ನಗರಸಭೆಯ ‘ಛತ್ರಿ’ ಪ್ರಯತ್ನ ಗಮನ ಸೆಳೆಯಿತು. ಜಾಥಾದಲ್ಲಿ 50 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಿ ಎಲ್ಲರಿಗೂ ಛತ್ರಿಗಳನ್ನು ನೀಡಿತ್ತು. ಇದರಿಂದ ಜಾಥಾದಲ್ಲಿ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಯಿತು. ಜತೆಗೆ, ಬಣ್ಣ ಬಣ್ಣದ ಕೊಡೆಗಳಿಂದ ಜಾಥಾ ಕೂಡ ಕಳೆಗಟ್ಟಿತ್ತು. ಉಡುಪಿ ನಗರಸಭೆಯಿಂದ ಜೋಡುಕಟ್ಟೆಯವರೆಗೆ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.