ADVERTISEMENT

‘ಜಿಎಸ್‌ಟಿ ಹೆಸರಿನಲ್ಲಿ ಜನಸಾಮಾನ್ಯರ ಸುಲಿಗೆ’

ಜಿಲ್ಲಾ ಕಾಂಗ್ರೆಸ್‌ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 15:42 IST
Last Updated 3 ಜುಲೈ 2018, 15:42 IST

ಉಡುಪಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ವರ್ಷ ಕಳೆದರೂ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಸರಳೀಕರಣಗೊಳ್ಳದೆ ಗೊಂದಲವಾಗಿ ಉಳಿದಿದೆ. ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ’ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪಿಸಿದ್ದಾರೆ.

ಜಿಎಸ್‌ಟಿ ಹೆಸರಿನಲ್ಲಿ ದಿನಬಳಕೆ ವಸ್ತುಗಳಿಗೆ ಶೇ 5ರಿಂದ ಶೇ 12ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಅಂತೆಯೇ ಹಲವು ವಸ್ತುಗಳಿಗೆ ಗರಿಷ್ಠ ಶೇ 28 ಹಾಗೂ ಶೇ 18 ಶ್ರೇಣಿಗಳಾಗಿ ವಿಂಗಡಿಸಿ ತೆರಿಗೆ ವಸೂಲು ಮಾಡಲಾಗುತ್ತಿದೆ. ಐಶಾರಾಮಿ ವಸ್ತುಗಳೆಂದು ಅಗತ್ಯ ವಸ್ತುಗಳಾದ ಸಿಮೆಂಟ್, ಏರ್‌ಕಂಡಿಷನರ್, ವಾಷಿಂಗ್ ಮೆಶಿನ್, ರೆಫ್ರಿಜರೇಟರ್‌ಗಳಿಗೆ ಶೇ 28 ಜಿಎಸ್‌ಟಿ ವಿಧಿಸುವ ಮೂಲಕ ಜನರ ಮೇಲೆ ತೆರಿಗೆ ಹೊರೆಯನ್ನು ಅಧಿಕಗೊಳಿಸಿದೆ ಎಂದು ದೂರಿದ್ದಾರೆ.

ಜಿಎಸ್‌ಟಿ ಅನುಷ್ಠಾನವನ್ನು ಕೇಂದ್ರ ಸರ್ಕಾರವು ಮಹಾ ಸಾಧನೆ ಎಂದು ಬಿಂಬಿಸಿಕೊಂಡಿದ್ದು, ಜಿಎಸ್‌ಟಿ ಜಾರಿಗೆ ಬಂದ ದಿನವನ್ನು ಜಿಎಸ್‌ಟಿ ದಿವಸ ಎಂದು ಆಚರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ವ್ಯಾಪಾರಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ವಿವಿಧ ಶ್ರೇಣಿಯ ದರ ನಿಗದಿಯಲ್ಲಿಯ ಲೋಪದೊಂದಿಗೆ ಜಿಎಸ್‌ಟಿ ಜಾರಿಯಲ್ಲಿ ಕೇಂದ್ರ ಸರ್ಕಾರ ಎಡವಿದೆ. ಜಿಎಸ್‌ಟಿ ಉದ್ಯಮಿಗಳು ಹಾಗೂ ಜನಸಾಮಾನ್ಯರ ಪಾಲಿಗೆ ಮಾರಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.